ನಂಜನಗೂಡು: ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಛೇರಿಯಲ್ಲಿ ರೈತರ ಕುಂದು ಕೊರತೆ ಸಭೆಯನ್ನು ನಡೆಸಲಾಯಿತು. ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿರುವ 7 ಗಂಟೆ ವಿದ್ಯುತ್ ಸರಿಯಾಗ ನೀಡುತ್ತಿಲ್ಲ. ಹಗಲು ಮತ್ತು ರಾತ್ರಿಯ ವೇಳೆ ವಿದ್ಯುತ್ ಮದ್ಯೆ ನಿಲುಗಡೆಗೊಳಿಸುತ್ತಿದ್ದು, ನಿಲುಗಡೆ ಗೊಂಡಿರುವ ವಿದ್ಯುತ್ ಮತ್ತೆ ವಾಪಸ್ ನೀಡದೆ ರೈತರಿಗೆ ತೊಂದರೆಯಾಗುತ್ತಿದೆ. ಇದರಿಂದ ಕಡಿಮೆ ವಿದ್ಯುತ್ ನಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.
ರಾತ್ರಿ ಸಮಯದಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು. ಜಮೀನುಗಳಲ್ಲಿ ರಾತ್ರಿ ವೇಳೆಯಲ್ಲಿ ಕಾವಲು ಕಾಯಲು ಹೋದ ಸಂದರ್ಭದಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಕಾಡುಪ್ರಾಣಿಗಳ ಕಾಟದಿಂದ ಬೆಳೆಗಳು ನಷ್ಟವಾಗುವ ಜೊತೆಗೆ, ಪ್ರಾಣಾಪಾಯದ ಸಾಧ್ಯತೆ ಹೆಚ್ಚಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಹೆಚ್ಚಿನ ಒತ್ತಡ ಕಂಡುಬರುತ್ತಿದ್ದು ಸರಿಪಡಿಸುವಂತೆ ಆಗ್ರಹಿಸಿದರು.
ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆ ನಡುವೆ ಸಮನ್ವಯ ಕೊರತೆಯಿಂದಾಗಿ ಪರಿಸರ ಹಾನಿಯಾಗುತ್ತಿದೆ. ತಾಲ್ಲೂಕಿನ ಹಲವು ಕೆರೆಗಳ ಆವರಣದಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಗ್ರಾಮಗಳಲ್ಲಿ ಕಿರಾಣಿ ಅಂಗಡಿಗಳಿಗೆ ಕಮರ್ಷಿಯಲ್ ಮೀಟರ್ ಗಳನ್ನು ಅಳವಡಿಸಿ ಇಲಾಖೆಗೆ ಆದಾಯ ಬರುವಂತೆ ಗಮನಹರಿಸಬೇಕು. ಬೆಂಕಿ ಅಪಘಾತದಿಂದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಭೆಯಲ್ಲಿ ಹಾಜರಿದ್ದ ರೈತರು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಕಾರ್ಯಪಾಲಕ ಇಂಜಿನಿಯರ್ ಆನಂದ್ ಮಾತನಾಡಿ, ರೈತರು ಕೊಟ್ಟಿರುವ ದೂರಿನ ಮೇರೆಗೆ ಸಮಸ್ಯೆಗಳನ್ನ ಶೀಘ್ರದಲ್ಲೇ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಇಲಾಖೆಯಿಂದ ಹೊಸದಾಗಿ ಬಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು ಇದನ್ನು ರೈತರು ಸ್ವದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಈ ಸಭೆಯಲ್ಲಿ ರೈತ ಮುಖಂಡರಾದ ಹೆಜ್ಜೆಗೆ ಪ್ರಕಾಶ್, ಇಮ್ಮಾವು ರಘು, ಸಿಂಧುವಳ್ಳಿ ಸತೀಶ್, ಮಂಜೇಶ್ ಕುಮಾರ್, ಶ್ವೇತಾ, ಎಇಇ ದೇವರಾಜಯ್ಯ, ಮಂಜುನಾಥ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಹಾಜರಿದ್ದರು.

