ನಂಜನಗೂಡು: ಕಾವೇರಿ, ಕಪಿಲಾ ನದಿ ನೀರನ್ನು ನಮ್ಮ ರೈತರಿಗೆ ಬಿಡದೇ ನೇರವಾಗಿ ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ನಂಜನಗೂಡಿನ ಕಾವೇರಿ ನೀರಾವರಿ ಕಛೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಮತ್ತು ರಾಜ್ಯ ಉಪಾಧ್ಯಕ್ಷ ಇಮಾಮ್ ರಘು ನೇತೃತ್ವದಲ್ಲಿ ಜಮಾಯಿಸಿದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಮೇ, ಜೂನ್ ತಿಂಗಳಲ್ಲಿ ಡ್ಯಾಮ್ ನೀರನ್ನು ಕುಡಿಯಲು ಮಾತ್ರ ಬಿಡುವಂತೆ ಆದೇಶ ಮಾಡಿದ್ದರು. ಈಗ ಮೂರುವರೆ ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಆದೇಶಿಸಿದ್ದಾರೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗಿ ನೀರು ಬಂದಿದೆ. 2000 ಕ್ಯೂಸೆಕ್ ನೀರನ್ನು ಕಬಿನಿ ನಾಲೆಗೆ ಬಿಟ್ಟಿರುವುದಾಗಿ ಹೇಳುತ್ತಾರೆ. ಆದರೆ, ಆ ನೀರು ಎಲ್ಲಿಗೆ ಹೋಯಿತು? ನಮ್ಮ ಕೆರೆಗಳಿಗೆ, ನಾಲೆಗಳಿಗೆ, ಗದ್ದೆಗಳಿಗೆ ಒಂದು ಹನಿ ನೀರೂ ಬಂದಿಲ್ಲ. ನೇರವಾಗಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳಿಂದ ರೈತರಿಗೆ ನೀರು ತಲುಪುತ್ತಿಲ್ಲ. ಕೆರೆ ಮತ್ತು ನಾಲೆಗೆ ನೀರು ಬಿಡದ ಕರ್ನಾಟಕ ವಿರೋಧಿ ನೀರಾವರಿ ಇಲಾಖೆ ನಮಗೆ ಬೇಕಾ? ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು ಅವರು, ಬೆಂಗಳೂರಿನಲ್ಲಿ ಕುಡಿಯಲು, ತೊಳೆಯಲು ಕೂಡ ನೀರಿಲ್ಲ. ದೇವರ ದಯದಿಂದ ಮಳೆಯಾಗಿ ನೀರು ಬಂದರೂ ಕೂಡ 25.000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ನಮ್ಮ ಅಚ್ಚುಕಟ್ಟು ಪ್ರದೇಶ, ಕೆರೆ-ಕಟ್ಟೆಗಳಿಗೆ ನೀರು ಬಿಡುತ್ತಿಲ್ಲ. ನಮ್ಮ 28 ಸಂಸದರು ಏನು ಮಾಡುತ್ತಿದ್ದಾರೆ? ಲೋಕಸಭೆಯಲ್ಲಿ ಒಬ್ಬರೂ ತುಟಿ ಬಿಚ್ಚುತ್ತಿಲ್ಲ. ಅಧಿಕಾರಿಗಳು ಕೂಡ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಪ್ರಜ್ಞಾವಂತರು ಎಂದು ಭಾವಿಸಿದ್ದೆವು. ಆದರೆ ನಮಗೆ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ನಮಗೆ ಇಲ್ಲಿ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ನೀರು-ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಫಸಲಿಗೆ ನೀರು ಕೇಳುವುದು ಸರಿನಾ? ಎಂದು ತಮಿಳುನಾಡು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ಶಿವಣ್ಣ, ಮಹದೇವ ನಾಯಕ, ಮಹೇಶ್, ಮೋಹನ್, ಶ್ವೇತ, ರತ್ನಮ್ಮ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

