ಮೈಸೂರು : ಜಮೀನು ವಿವಾದ ವಿಚಾರವಾಗಿ ಸಂಬಂಧಿಕರ ನಡುವೆ ಗಲಾಟೆ ನಡೆದು ಕ್ರಿಮಿನಾಶಕ ಸೇವಿಸಿ ರೈತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಣಸೂರು ತಾಲೂಕು ಗಟಹಳ್ಳಿಯಲ್ಲಿ ನಡೆದಿದೆ.
ಒಂದೇ ಕುಟುಂಬದವರ ನಡುವೆ ನಡೆದ ಗಲಾಟೆ ಹಿನ್ನಲೆ ಮನನೊಂದ ರೈತ ಮಹಿಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶಿಲ್ಪಾ (26) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಲ್ಪಾ ಸ್ಥಿತಿ ಗಂಭೀರವಾಗಿದೆ. ಜಮೀನಿಗಾಗಿ ಗಲಾಟೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಿಲ್ಪಾ ಪತಿ ಕೆಂಗಣ್ಣ ತಾಯಿ ನಾಗಮ್ಮ ಹೆಸರಲ್ಲಿ ಒಂದು ಎಕ್ರೆ ಜಮೀನಿದೆ. ಕೆಂಗಣ್ಣಗೆ ಓರ್ವ ಸಹೋದರ ಮತ್ತು ಸಹೋದರಿ ಇದ್ದಾರೆ. ಒಂದು ಎಕ್ರೆ ಜಮೀನಿಗಾಗಿ ಒಂದೇ ಕುಟುಂಬದವರ ನಡುವೆ ಭಿನ್ನಭಿಪ್ರಾಯ ಉಂಟಾಗಿದೆ.
ತಾಯಿಯಿಂದ ಕೆಂಡಗಣ್ಣ ಅಕ್ಕ ಸುಮಾ ಜಮೀನು ಬರೆಸಿಕೊಂಡಿದ್ದಾರೆಂದು ಆರೋಪಿಸಿ ನ್ಯಾಯ ಕೇಳಲು ಹೋಗಿದ್ದಾರೆ. ಈ ವೇಳೆ ಸುಮ, ಚಂದ್ರು, ಗವಿರಾಜು ಹಾಗೂ ಮಲ್ಲ ರವರು ಕೆಂಗಣ್ಣ ಹಾಗೂ ಪತ್ನಿ ಶಿಲ್ಪಾ ಮೇಲೆ ಮುಗಿಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಮನನೊಂದ ಶಿಲ್ಪಾ ಕ್ರಿಮಿನಾಶಕ ಸೇವಿಸಿದ್ದಾರೆ.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಶಿಲ್ಪಾ ನನ್ನ ಪರಿಸ್ಥಿತಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

