ಮೈಸೂರು: ಭತ್ತ ಬೆಳೆಯಲು ಸಾಲ ಮಾಡಿ ಬೆಳೆದಿದ್ದ ಭತ್ತಕ್ಕೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ದಿವಾಕರ್(45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಗ್ರಾಮದ ಪಕ್ಕದಲ್ಲಿರುವ ತನ್ನ ಮೂರೂವರೆ ಎಕರೆ ಜಮೀನಿನಲ್ಲಿ ಭತ್ತದ ಬೆಳೆ ಬೆಳೆಯಲು ಗಳಿಗೆಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1.80 ಲಕ್ಷ ಬೆಳೆ ಸಾಲ, ಹಾಗೂ ವಿವಿಧ ಖಾಸಗಿ ಪೈನಾನ್ಸ್ ಗಳಲ್ಲಿ 5 ಲಕ್ಷ ಸಾಲ ಪಡೆದಿದ್ದರು.

ಸಾಲ ಕಟ್ಟಲು ಭತ್ತದ ಬೆಳೆಯನ್ನೇ ನಂಬಿ ಕೊಂಡಿದ್ದರು, ಆದರೆ ತಾನು ಖರ್ಚು ಮಾಡಿ ಬೆಳೆದ ಭತ್ತದ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಮನ ನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸೀರೆಯಿಂದ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಮತ್ತು ಮಕ್ಕಳು ಬೆಳಿಗ್ಗೆ ಎದ್ದು ನೋಡಿದಾಗ ನೇಣು ಬಿಗಿದು ಸ್ಥಿತಿಯನ್ನು ಕಂಡು ಕಿರುಚಾಡಿದಾಗ ಅಕ್ಕಪಕ್ಕದ ಮನೆಯವರು ಬಂದು ನೋಡಿ ಕೂಡಲೇ ಕೆ.ಆರ್.ನಗರ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡು ನಂತರ ಶವ ಪರೀಕ್ಷೆಗೆ ಕೆ.ಆರ್.ನಗರ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸ್ಸುದಾರರಿಗೆ ಒಪ್ಪಿಸಲಾಯಿತು. ಭತ್ತಕ್ಕೆ ಬೆಂಬಲ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಂಡ ದಿವಾಕರ್ ಕುಟುಂಬ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.