ನಂಜನಗೂಡು: ಮಳೆಯ ಅವಾಂತರಕ್ಕೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಓರ್ವ ರೈತ ಮತ್ತು ಹಸುಗಳು ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಏಚಗಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದರಾಜು 52 ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಮೇವು ಮೇಯುತ್ತಿದ್ದ ಎರಡು ಹಸುಗಳು ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಎರಡು ಹಸುಗಳು ಸಾವನ್ನಪ್ಪಿವೆ.
ಇದನ್ನು ನೋಡಿದ ರೈತ ಸಿದ್ಧರಾಜು ಹಸುಗಳನ್ನು ಕಾಪಾಡಲು ಹೋಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತಾನು ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸುಮಾರು 2 ಲಕ್ಷ ರೂ. ಬೆಳೆಬಾಳುವ ಹಸುಗಳು ಮೃತಪಟ್ಟಿವೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

