ನಂಜನಗೂಡು: ಗಬ್ಬೆದ್ದು ನಾರುತ್ತಿರುವ ಕೊಳಚೆ ಚರಂಡಿ ನೀರಿನ ದುರ್ವಾಸನೆಗೆ ಕುಟುಂಬಗಳು ಮನೆಗಳನ್ನೇ ತೊರೆಯಲು ನಿರ್ಧಾರ ಮಾಡಿದ್ದಾರೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ದೊಡ್ಡ ಮೋರಿಯ ಸಮಸ್ಯೆ ಹೇಳ ತೀರದು.
ಗ್ರಾಮದ ಕೊಳಚೆ ನೀರೆಲ್ಲ ಈ ಚರಂಡಿಯಲ್ಲೇ ಹರಿದು ಹೋಗುತ್ತದೆ. ಕೇವಲ 15 ಅಡಿ ಚರಂಡಿಯನ್ನು ನಿರ್ಮಾಣ ಮಾಡದೇ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ಕೊಳಚೆ ನೀರು, ಮನೆಗೆ ನುಗ್ಗುತ್ತದೆ. ಅಲ್ಲದೆ ಕೆಟ್ಟ ದುರ್ವಾಸನೆ ಬೀರುತ್ತಿದೆ. ಹಗಲು ರಾತ್ರಿ ಎನ್ನದೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ 2023 ರಲ್ಲಿ ಲಿಖಿತವಾಗಿ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೊಳಚೆ ಚರಂಡಿ ನೀರಿನ ದುರ್ವಾಸನೆಯಿಂದ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ.
ನಮ್ಮ ಮನೆಯಲ್ಲಿ ಕುಟುಂಬಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಕೂಡಲೇ ಚರಂಡಿಯನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ನಾವು ಮನೆ ತೊರೆದು ತಾಲ್ಲೂಕು ಪಂಚಾಯಿತಿ ಕಛೇರಿಗೆ ಕುಟುಂಬಗಳ ಸಮೇತ ಬಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

