ನಂಜನಗೂಡು: ಜ.23 ರಂದು ನಡೆಯುವ ಜನಪ್ರತಿನಿಧಿಗಳು ಮತ್ತು ರೈತರ ಮುಖಾಮುಖಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಪ್ರಚಾರ ರಥಕ್ಕೆ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಏಕೀಕರಣ ಸಮಿತಿಯ ರಾಜ್ಯ ಮುಖಂಡ ಪಚ್ಚೆ ನಂಜುಂಡಸ್ವಾಮಿ ಚಾಲನೆ ನೀಡಿದರು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮೈಸೂರು ಜಿಲ್ಲೆ ಇವರ ವತಿಯಿಂದ ಜ.23 ರಂದು ತಾಂಡವಪುರ ಗ್ರಾಮದಲ್ಲಿ ಸ್ಥಳೀಯ ಶಾಸಕರು, ಸಂಸದರು, ರೈತರ ರೈತ ಮುಖಂಡರ ಮುಖಾಮುಖಿ ರೈತ ಸ್ನೇಹಿತ ಕಾರ್ಯಕ್ರಮವನ್ನು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ರೈತರನ್ನು ಆಹ್ವಾನಿಸಲು ಪ್ರಚಾರ ರಥಕ್ಕೆ ಚಾಲನೆ ಸಿಕ್ಕಿದೆ.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಏಕೀಕರಣ ಸಮಿತಿಯ ರಾಜ್ಯ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ರೈತರ ಸಮಸ್ಯೆಯನ್ನು ಬಗೆಹರಿಸಲು ಶಾಸಕರು ಮತ್ತು ಸಂಸದರ ಜೊತೆ ರೈತರು ಚರ್ಚೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ರೈತರ ಹಕ್ಕೋತ್ತಾಯಗಳನ್ನು ಇಡಲಾಗುತ್ತದೆ. ಸುಮಾರು 17 ಹಕ್ಕೋತ್ತಾಯಗಳನ್ನು ಶಾಸಕರು ಮತ್ತು ಸಂಸದರ ಬಳಿ ಇಡುತ್ತೇವೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಮೋಹನ್, ಮಹದೇವ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ತಿಮ್ಮಣ್ಣ, ಕೆಂಪಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

