ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶೂಲಿನಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ. ಪರಿಸರದ ಸೌಂದರ್ಯವೂ ಹೆಚ್ಚಾಗಲಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಮನೆಯ ಸುತ್ತಲೂ ಗಿಡಗಳನ್ನು ಬೆಳೆಸುವುದಲ್ಲದೇ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ನಂತರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಕೆ.ಧರ್ಮರಾಜ್ ಮಾತನಾಡಿ, ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸಬೇಕು. ಇದು ಪರಿಸರವನ್ನು ಉಳಿಸುವ ಮಾರ್ಗ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸಬೇಕು. ಮರುಬಳಕೆ ವಸ್ತುಗಳನ್ನು ಉಪಯೋಗಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳ ಮಾರಣಹೋಮ ನಡೆಯುತ್ತಿದೆ.

ಪ್ರತಿಯೊಬ್ಬರೂ ಹುಟ್ಟಿದ ದಿನದಂದು ಗಿಡ ನೆಟ್ಟು ಪೋಷಿಸಬೇಕು. ಸಮಾರಂಭಗಳಲ್ಲಿ ಉಡುಗೊರೆಗಳ ಬದಲಾಗಿ ಗಿಡಗಳನ್ನು ನೀಡುವುದರಿಂದ ಪರಿಸರವನ್ನು ಉಳಿಸಬಹುದು. ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮರ-ಗಿಡಗಳನ್ನು ಪೋಷಿಸಿದರೆ, ನಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರವೂ ಸಂರಕ್ಷಣೆ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶೂಲಿನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಕೆ.ಧರ್ಮರಾಜ್, ಶಿಕ್ಷಕರಾದ ಪುನೀತ್, ಪವಿತ್ರ, ಪೂಜಾ, ಮಲ್ಲೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ರೋಜಾಮಣಿ, ಕೃಷಿ ಮೇಲ್ವಿಚಾರಕ ಜೈಪಾಲ್, ವಲಯ ಮೇಲ್ವಿಚಾರಕ ಲೋಹಿತ್, ಸೇವಾ ಪ್ರತಿನಿಧಿ ಶೋಭಮಣಿ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.