ನಂಜನಗೂಡು: ಊಟಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 ರಲ್ಲಿ ನಂಜನಗೂಡು ತಾಲ್ಲೂಕಿನ ಮುದ್ದನಹಳ್ಳಿ ಹತ್ತಿರ ರಸ್ತೆ ಅಗಲೀಕರಣಕ್ಕಾಗಿ  98 ಮರಗಳನ್ನು ಕಡಿಯುವ ವಿಷಯದಲ್ಲಿ ಸಿಂಧುವಳ್ಳಿಪುರದ ಹತ್ತಿರ  ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ  ಪರಿಸರಕ್ಕಾಗಿ  ಸಂಘಟನೆ, ರೈತ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಜನ ಸಂಗ್ರಾಮ ಪರಿಷತ್ತಿನ ಸದಸ್ಯರು ಭಾಗಿಯಾಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ  ಪರಿಸರಕ್ಕಾಗಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಡಿ.12ರಂದು  ಮರ ಕಡಿಯುವ ಸಂಬಂಧ ಪ್ರಕಟವಾಗಿದೆ. ಮರಗಳನ್ನು ಕಡಿಯಲು ಆಕ್ಷೇಪಣೆ ಸಲ್ಲಿಸಲು ಕೇವಲ ಎರಡು ದಿನಗಳ ಕಾಲಾವಕಾಶ ಕೊಟ್ಟು ಅಹವಾಲು ಸಭೆ ಕರೆದಿರುವುದು ನಿಯಮಬಾಹಿರ ಎಂದು ತಿಳಿಸಿದರು. ಆಕ್ಷೇಪಣೆ ಸಲ್ಲಿಸಲು ಕನಿಷ್ಠ ಹತ್ತು ದಿನಗಳ ಕಾಲಾವಕಾಶ ಕೊಟ್ಟು ಅಹವಾಲು ಸಭೆ ಕರೆಯಬೇಕು. ಆದುದರಿಂದ ಈ ಸಭೆಯನ್ನು ರದ್ದು ಪಡಿಸಿ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ದಸಂಸ ( ಅಂಬೇಡ್ಕರ್ ವಾದ )  ಜಿಲ್ಲಾ  ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ, ಮರಗಳನ್ನು ಕಡಿಯಲು ಅವಕಾಶ ಕೊಡದೆ ಉಳಿಸುವ ಕೆಲಸ ಮಾಡಲಿ. ಟೋಲ್ ಸಂಗ್ರಹಿಸಿ ರಸ್ತೆ ನಿರ್ವಹಣೆ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಪರಿಸರಕ್ಕಾಗಿ ನಾವು ಸಂಘಟನೆಯ ಬಾನು ಪ್ರಶಾಂತ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಳ ಹಂತದ ಅಧಿಕಾರಿಗಳು ಈ ಅಹವಾಲು ಸಭೆಗೆ ಬಂದಿದ್ದಾರೆ, ಪ್ರಾಜೆಕ್ಟ್ ಇಂಜಿನಿಯರ್ ಅಥವಾ ಮ್ಯಾನೇಜರ ಸಭೆಗೆ ಬರಬೇಕು, ಕಾಟಾಚಾರಕ್ಕೆ ಈ ಸಭೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರಕ್ಕಾಗಿ ನಾವು’ ಸಂಘಟನೆಯ ಜಿಲ್ಲಾಧ್ಯಕ್ಷರಾದ ಲೀಲಾ ವೆಂಕಟೇಶ್ ಅವರು ಒಂದು ತಿಂಗಳ ಹಿಂದೆ ಗುಂಡ್ಲುಪೇಟೆ ವಲಯದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಗೆ ನೀಡಿದ್ದ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸಿಲ್ಲ , ಹೀಗಾದರೆ ಇಂತಹ ಅಹವಾಲು ಸಭೆಯನ್ನು ಏಕೆ ಕರೆಯಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಜನ ಸಂಗ್ರಾಮ ಪರಿಷತ್ತಿನ ರಾಜ್ಯ ಗೌರವಾಧ್ಯಕ್ಷರಾದ  ವಿಜಯ್ ಕುಮಾರ್ ಮಾತನಾಡಿ,  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿದೆ ಅಪಘಾತಗಳಿಗೆ ಕಾರಣವಾಗುತ್ತಿದೆ, ಸರ್ವಿಸ್ ರಸ್ತೆ ನಿರ್ಮಿಸಿ ಎಂದು ಹೋರಾಟ ಮಾಡಿರ ತಮ್ಮ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘ ( ಸಾಮೂಹಿಕ ನಾಯಕತ್ವ )  ತಾಲೂಕು ಅಧ್ಯಕ್ಷರಾದ ಸತೀಶ್ ಮಾತನಾಡಿ, ಈ ಸಭೆಯನ್ನು ರದ್ದು ಪಡಿಸಿ , ನಿಯಮಗಳ ಪ್ರಕಾರ ಇನ್ನೊಂದು ಸಭೆ ಕರೆಯಿರಿ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಕಾರ್ಯಕರ್ತರು ಸಭೆ ರದ್ದಾಗಲಿ ಎಂದು ಘೋಷಣೆ ಕೂಗತೊಡಗಿದರು. ಒಕ್ಕೊರಲಿನ ಆಗ್ರಹಕ್ಕೆ ಮಣಿದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸುಮಿತ್ರಾ ಅವರು ಬುಧವಾರ ನಿಗದಿಯಾಗಿದ್ದ ಸಭೆಯನ್ನು ರದ್ದು ಪಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಮುಂದೆ ಎಲ್ಲಾ ನಿಯಮಗಳನ್ನು ಅನುಸರಿಸಿ ಸಭೆ ಕರೆಯಲಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಈ ವೇಳೆಯಲ್ಲಿ ನಂಜನಗೂಡು ವಲಯ ಅರಣ್ಯಾಧಿಕಾರಿ ನಿತಿನ್ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

ಈ ಸಭೆಯಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯ ಲೀಲಾ ಶಿವಕುಮಾರ್, ಭಾಗ್ಯ,ಅಂಜನಾ, ಸುಗುಣ, ಗುರುಸ್ವಾಮಿ, ಗಂಟಯ್ಯ, ವಿಶ್ವನಾಥ್, ಬಂಗಾರನಾಯಕ, ಅರ್ಕ್ಬ, ಸಾರ್ಥಕ್ ಪಿ .ಗೌಡ, ಪ್ರಭಾಕರ್,  ದಂಸಸ ( ಸಂಯೋಜಕ )  ಜಿಲ್ಲಾ ಸಂಚಾಲಕ ಕಾರ್ಯ ಬಸವಣ್ಣ , ಅಭಿ ನಾಗಭೂಷಣ ಮತ್ತಿತರರು ಪಾಲ್ಗೊಂಡಿದ್ದರು.