ನಂಜನಗೂಡು: ಆಟೋದಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಟೋ ಚಾಲಕರಿಗೆ ಪೊಲೀಸ್ ಇನ್ಸ್ಪೆಕ್ಟರ್ ಸಿಎಂ ರವೀಂದ್ರ ಎಚ್ಚರಿಕೆ ನೀಡಿದರು.
ನಗರದ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ತುರ್ತು ಸಭೆಯನ್ನು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ ಮತ್ತು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ನೇತೃತ್ವದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ ಮಾತನಾಡಿ, ನಂಜನಗೂಡು ಐತಿಹಾಸಿಕ ಸ್ಥಳವಾಗಿದ್ದು, ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಇರುವುದರಿಂದ ಪ್ರವಾಸಿ ತಾಣವಾಗಿದೆ. ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಪ್ರಯಾಣಿಕರು ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆಟೋ ಚಾಲಕರಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಅರಿವು ಮತ್ತು ಮಾದಕ ವ್ಯಸನ ತಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಆಟೋ ಚಾಲನೆ ಮಾಡಬೇಕು. ದಾಖಲಾತಿಗಳನ್ನು ಇಟ್ಟುಕೊಂಡಿರಬೇಕು. ಆಟೋ ಚಾಲಕರು ಪಾರ್ಕಿಂಗ್ ನಲ್ಲಿಯೇ ಪಾರ್ಕಿಂಗ್ ಮಾಡಬೇಕು. ಆಟೋಗಳಲ್ಲಿ ಶಾಲಾ ಮಕ್ಕಳು ಕರೆದುಕೊಂಡು ಹೋಗುವಾಗ ಎಚ್ಚರಿಕೆ ವಹಿಸುವುದು. ಆಟೋ ಗಳಲ್ಲಿ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು. ತುರ್ತು ಸಂದರ್ಭಗಳಿಗೆ 112 ಸಂಖ್ಯೆಗೆ ಕರೆ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡುವಾಗ ಎಚ್ಚರಿಕೆ ವಹಿಸಬೇಕು.
ಸಂಚಾರಿ ನಿಯಮಗಳನ್ನು ಚಾಲಕರು, ಪಾಲನೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನಂಜನಗೂಡಿನ ರೈಲ್ವೆ ನಿಲ್ದಾಣದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಆಟೋ ಚಾಲಕರು ಹೆಚ್ಚುವರಿ ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ನಂಜನಗೂಡಿನಲ್ಲಿ ಐನೂರಕ್ಕೂ ಹೆಚ್ಚು ಆಟೋಗಳು ಇವೆ. ಕೆಲವು ಆಟೋ ಚಾಲಕರು ಡ್ರಗ್ಸ್ ಉಪಯೋಗಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಆಟೋದಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ಕೊಡಬೇಕು. ನೀವು ಕೊಟ್ಟಿರುವ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರವಿಕುಮಾರ್, ಮಹೇಶ್, ಕೃಷ್ಣ ಸೇರಿದಂತೆ ಆಟೋ ಚಾಲಕರು ಮತ್ತು ಮಾಲೀಕರು ಹಾಜರಿದ್ದರು.

