ನಂಜನಗೂಡು: ನಗರದಲ್ಲಿಡೆ ಗಾಂಜಾ ಮತ್ತು ಡ್ರಗ್ಸ್ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕಾಲೇಜು ಬಾಗಿಲು ತನಕ ತಲುಪುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೇ ಎಂದು ನಂಜನಗೂಡು ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ನಗರಸಭೆ ಆವರಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಯಿತು.

ನಂಜನಗೂಡು ಪಟ್ಟಣದಲ್ಲಿ ಹೆಗ್ಗಿಲ್ಲದೆ ಡ್ರಗ್ಸ್ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಗಲಭೆಗಳು ನಡೆಯುತ್ತಿವೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ನಂಜನಗೂಡು ಪಟ್ಟಣಕ್ಕೆ ಬರುತ್ತಿದೆ. ವಿದ್ಯಾರ್ಥಿಗಳು ಕೂಡ ಬಲಿಯಾಗುತ್ತಿದ್ದಾರೆ. ಪೊಲೀಸರು ಯಾಕೆ ಮೌನ ವಹಿಸಿದ್ದಾರೆ ಎಂದು ಸದಸ್ಯರು ನಗರಸಭೆಯಲ್ಲಿ ಧ್ವನಿ ಎತ್ತಿದರು.

ಇದಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿಕ್ರಿಯಿಸಿ, ಡ್ರಗ್ಸ್ ಮಾಫಿಯಾ ಮತ್ತು ಗಾಂಜಾ ಮಾರಾಟ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಇದು ಕೇವಲ ಪೊಲೀಸನವರ ಕೆಲಸ ಮಾತ್ರವಲ್ಲ. ನಗರ ಸಭೆಯ ಎಲ್ಲಾ ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗಾದಾಗ ಮಾತ್ರ ಕಡಿವಾಣ ಹಾಕಲು ಸಾಧ್ಯ ಎಂದರು. ಕೈಗಾರಿಕಾ ಪ್ರದೇಶದಲ್ಲಿ ಹೊರ ರಾಜ್ಯದಿಂದ ಬರುವ ಕಾರ್ಮಿಕರು ಡ್ರಗ್ಸ್, ಗಾಂಜಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ರವೀಂದ್ರ ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಪೌರಾಯುಕ್ತ ವಿಜಯ್, ಉಪಾಧ್ಯಕ್ಷೆ ರಿಯಾನ ಬಾನು ಸೇರಿದಂತೆ ಸದಸ್ಯರು ನಗರಸಭಾ ಅಧಿಕಾರಿಗಳು ಹಾಜರಿದ್ದರು.