ನಂಜನಗೂಡು: ರಾಜ್ಯದಲ್ಲಿ 180 ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿರುವಾಗಲೇ ಕಾವೇರಿ ನೀರಾವರಿ ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಕರ್ನಾಟಕದ ರೈತರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಲ್ಲದೆ ಒಂದು ಕಾಳು ಬೆಳೆಯಲು ಆಗುತ್ತಿಲ್ಲ. ಕೆರೆ-ಕಟ್ಟೆ, ಕಾಲುವೆ, ನಾಲೆಗಳು ಸಂಪೂರ್ಣ ಬರಿದಾಗಿವೆ. ದನ-ಕರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ CWRCಯ ಈ ನಿರ್ಧಾರ ಖಂಡನೀಯ. ಕಾವೇರಿ ನೀರಾವರಿ ನಿಯಂತ್ರಣ ಸಮಿತಿಯವರು ನಮ್ಮ ರಾಜ್ಯಕ್ಕೆ ಮೋಸ ಮಾಡಿದ್ದಾರೆ.

ನಮ್ಮ ನೀರಾವರಿ ಇಲಾಖೆ ಮತ್ತು ನೀರಾವರಿ ಸಚಿವರು ರಾಜ್ಯದ ಬರದ ಸ್ಥಿತಿಯನ್ನು ಸಮಿತಿಯ ಮುಂದೆ ಮನದಟ್ಟು ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಬರದ ವಾಸ್ತವ ಚಿತ್ರಣವನ್ನು ಸಚಿವರಾದ ರಾಮಲಿಂಗ ರೆಡ್ಡಿ ಅವರು CWRCಯ ಮುಂದೆ ಮಂಡಿಸಬೇಕು.

ಕರ್ನಾಟಕದಲ್ಲಿನ ನೀರಿನ ಕೊರತೆ, ಬೆಳೆ ನಷ್ಟ, ಜಾನುವಾರುಗಳ ಸಮಸ್ಯೆಯನ್ನು ವಿವರಿಸಿ ಈ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡೇಗೌಡ, ಕಂದಗಾಲ ರಮೇಶ್, ಶಿವಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.