ಮೈಸೂರು: ತಾಲ್ಲೂಕಿನ ವರಕೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯ ಅಗತ್ಯದ ಕುರಿತು ಸಲ್ಲಿಸಿದ ಮನವಿಯಂತೆ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಿ ಇಂದು ಉದ್ಘಾಟನೆ ಮಾಡಲಾಗಿದೆ.ಅಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರ ಮನವಿಯಂತೆ ಆರೋಗ್ಯ ಕೇಂದ್ರ ಹಾಗೂ ಗ್ರಾಮಸ್ಥರ ವಿವಿಧ ಸಮಸ್ಯೆ ಪರಿಹಾರ ಹಾಗೂ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಭರವಸೆ ನೀಡಿದರು.

ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ 4 ಪಶು ಚಿಕಿತ್ಸಾಲಯವನ್ನು ವರಕೋಡು, ಉತ್ತನಹಳ್ಳಿ, ಮೂಡಲಹುಂಡಿಯಲ್ಲಿ ಪ್ರಾರಂಭ ಮಾಡಿದ್ದೇವೆ. ಈಗಾಗಲೇ ತಗಡೂರಿನಲ್ಲಿ ನೂತನ ಕಟ್ಟಡ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಲಾಗಿದೆ. ಈಗಾಗಲೇ 20 ಲಕ್ಷ ವೆಚ್ಚದಲ್ಲಿ ಸುಮಾರು 8 ಕಟ್ಟಡಗಳನ್ನು ದುರಸ್ಥಿ ಮಾಡಿಕೊಡಲಾಗಿದೆ. ಎಲ್ಲೆಲ್ಲಿ ಪಶು ಚಿಕಿತ್ಸಾಲಯದ ಅಗತ್ಯವಿದೆಯೋ ಅಲ್ಲಿ ಚಿಕಿತ್ಸಾಲಯ ಕೇಂದ್ರ ನಿರ್ಮಾ ಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಪಶು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನಾಗರಾಜ್, ಡಾ. ಪೂರ್ಣಚಂದ, ಡಾ. ಲಿಂಗರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ,ಮಾಜಿ ಅಧ್ಯಕ್ಷ ಬೀರೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುದುರಾಮೇಗೌಡ, ಮೂಡಲ ಹುಂಡಿ ರವಿಕುಮಾರ್ ಹಾಜರಿದ್ದರು.