ನಂಜನಗೂಡು: ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂದು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿಎಂ ರವೀಂದ್ರ ತಿಳಿಸಿದರು.
ನಂಜನಗೂಡು ನಗರದ ಟೀಚರ್ಸ್ ಕಾಲೋನಿಯಲ್ಲಿ ಮೈಸೂರು ಜಿಲ್ಲಾ ಪೊಲೀಸ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆ, ನಂಜನಗೂಡು ಉಪ ವಿಭಾಗ ವತಿಯಿಂದ ಮನೆಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಸಂಭ್ರಮ, ಸ್ನೇಹ ಬಳಗ ಮತ್ತು ಪೊಲೀಸ್ ಇಲಾಖೆ ನಂಜನಗೂಡು ಟೌನ್ ಇವರ ವತಿಯಿಂದ ಸರಗಳ್ಳತನ ಅಪರಾಧ ತಡೆ ಇನ್ನಿತರ ವಿಚಾರಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಮೊಬೈಲ್ ಬಳಕೆಯಿಂದ ದುಷ್ಪರಿಣಾಮ ಬೀರುತ್ತಿದ್ದು. ಮಕ್ಕಳಿಗೆ ಪೋಷಕರು ಮೊಬೈಲ್ ಕೊಡಬಾರದು.

ಸಾಧ್ಯವಾದಷ್ಟು ಮನೆಗಳ ಮುಂದೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಕಂಡಾಗ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯಿಂದ ಎರಡ್ಮೂರು ದಿನಗಳ ಕಾಲ ಹೊರಗಡೆ ಹೋದ ಸಂದರ್ಭದಲ್ಲಿ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ತುರ್ತು ಸಂದರ್ಭಗಳಿಗೆ 122ಗೆ ಕರೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತುರ್ತು ಸೇವೆಗಳು, ಮನೆ ಕಳ್ಳತನ, ಸರಕಳ್ಳತನ, ಸೈಬರ್ ಅಪರಾಧ, ಆನ್ಲೈನ್ ವಂಚನೆ, ಮಾದಕ ವಸ್ತುಗಳ ಬಗ್ಗೆ ಹಾಗೂ ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಎಎಸ್ಐ ದೇವರಾಜು, ಮಂಜುನಾಥ್, ಲಿಂಗೇಗೌಡರು, ಸಿಬ್ಬಂದಿಗಳಾದ ಕೃಷ್ಣ, ಮುರುಳಿಧರ್, ತಿಮ್ಮಯ್ಯ, ಶಿವಕುಮಾರ್, ವೈಎಂ ಮಹೇಶ್, ಬೀರಪ್ಪ, ಭರತ್, ಶಿವರಾಂ, ಸೈಯದ್ ಅರ್ಕುಡ, ನೇತ್ರಾವತಿ, ಸುಷ್ಮಿತಾ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

