ಮೈಸೂರು: ನಿಯತ್ತಿಗೆ ಮತ್ತೊಂದು ಪದವೇ ನಾಯಿ ಎಂಬ ಮಾತಿಗೆ ಮೇಟಗಳ್ಳಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹುಚ್ಚುನಾಯಿ ಕಡಿದು ಮೃತಪಟ್ಟ ಮಹಾಲಿಂಗೇಶ್ವರ ದೇವಾಲಯದ ಬಸವನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಶ್ವಾನಗಳು ಸ್ನೇಹಕ್ಕೆ ತುಂಬು ಅರ್ಥ ನೀಡಿವೆ.

ನಿನ್ನೆ ಮಹಾಲಿಂಗೇಶ್ವರನ ದೇವಾಲಯದ ಬಳಿ ಗ್ರಾಮದ ಬಸವನಿಗೆ ವಿಧಿವಿಧಾನವಾಗಿ ಅಂತ್ಯಕ್ರಿಯೆ ನೆರವೇರಿಸಿ ಗ್ರಾಮಸ್ಥರು ಅಂತಿಮ ವಿದಾಯ ಹೇಳಿದರು. ಎಲ್ಲಾ ಹಂತದಲ್ಲೂ ಎರಡು ಶ್ವಾನಗಳು ಜೊತೆಯಲ್ಲೇ ಇದ್ದು ವಿಶೇಷವಾಗಿ ಗಮನ ಸೆಳೆದವು.

ಹುಚ್ಚುನಾಯಿ ಕಡಿದ ಪರಿಣಾಮ ಬಸವ ಸಾವನ್ನಪ್ಪಿತು. ಮಹಾಲಿಂಗೇಶ್ವರನ ದೇವಾಲಯಕ್ಕೆ ಬಸವನನ್ನ ಮೀಸಲಿಡಲಾಗಿತ್ತು. ಬಸವನಿಗೆ ಮಹಾಲಿಂಗ ಎಂದೂ ಸಹ ಕರೆಯಲಾಗುತ್ತಿತ್ತು.ಮಹಾಲಿಂಗನಿಗೆ ಆಪ್ತರಾಗಿದ್ದವರು ಬ್ಲಾಕಿ ಮತ್ತು ಬ್ರೌನಿ ಈ ಎರಡು ನಾಯಿಗಳು.

ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತಹ ಸ್ನೇಹ ಆಪ್ಯಾಯತೆ ಈ ಮೂವರಲ್ಲಿ ಇತ್ತು.ಮಹಾಲಿಂಗನ ಅಗಲಿಕೆ ಶ್ವಾನಗಳು ಕೊರಗುವಂತೆ ಮಾಡಿತ್ತು. ನಿನ್ನೆ ಮಹಾಲಿಂಗನ ಮೃತದೇಹವನ್ನ ಮೇಟಗಳ್ಳಿ ಹಾಗೂ ಬಿಎಂಶ್ರೀ ನಗರ ಬಡಾವಣೆಯಲ್ಲಿ ಮೆರವಣಿಗೆ ಮಾಡಿ ಎಲ್ಲರಿಗೂ ಅಂತಿಮ ದರುಶನಕ್ಕೆ ಅವಕಾಶ ನೀಡಿ ದೇವಾಲಯದ ಪಕ್ಕದಲ್ಲೇ ಜೆಸಿಬಿ ಮೂಲಕ ಗುಂಡಿ ತೆಗೆದು ಅಂತಿಮ ಕಾರ್ಯ ನೆರವೇರಿಸಲಾಯಿತು.

ಈ ಎಲ್ಲಾ ಹಂತದಲ್ಲೂ ಬ್ಲಾಕಿ ಹಾಗೂ ಬ್ರೌನಿ ನಾಯಿಗಳು ಜೊತೆಯಲ್ಲೇ ಇದ್ದು ಮೂಕಸಾಕ್ಷಿಯಾಗಿ ನಿಂತು ತಮ್ಮ ಸ್ನೇಹಕ್ಕೆ ಅರ್ಥ ನೀಡಿದವು. ಅಂತಿಮ ಕ್ಷದಲ್ಲಿ ಎರಡು ನಾಯಿಗಳು ಮಹಾಲಿಂಗನ ದರುಶನ ಪಡೆದು ತಮ್ಮದೇ ಆದ ರೀತಿಯಲ್ಲಿ ನಮನ ಸಲ್ಲಿಸಿ ಹಿಂದಿರುಗಿದವು. ಈ ಹೃದಯಸ್ಪರ್ಶಿ ಘಟನೆಗೆ ಮೇಟಗಳ್ಳಿ ಜನ ಸಾಕ್ಷಿಯಾದರು.