ನಂಜನಗೂಡು: ಜನರ ಸಮಸ್ಯೆ ಕೇಳಿ ಸ್ಥಳದಲ್ಲೇ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ನಂಜನಗೂಡು ತಾಲ್ಲೂಕಿನ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿದರು.
ನಗರದ ಕಾಮಾಕ್ಷಿಬಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ನಂಜನಗೂಡು ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಎಸ್.ಪಿ ಅವರ ಮುಂದೆ ಇಟ್ಟರು.
ಸಭೆಯಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು. ಯಾವ ಪ್ರಕರಣ ಯಾವ ಹಂತದಲ್ಲಿದೆ, ತನಿಖೆ ವಿಳಂಬ ಯಾಕಾಗುತ್ತಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಎಸ್.ಪಿ ಮಾಹಿತಿ ಪಡೆದರು. ಬಾಕಿ ಉಳಿದ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳ ಸರಮಾಲೆ:
ಸಭೆಯಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಪಟ್ಟಣದ ಆರ್.ಪಿ ರಸ್ತೆ, ಬಜಾರ್ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡುವ ಫುಟ್ಪಾತ್ಗಳನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ರಸ್ತೆಗಿಳಿದು ಓಡಾಡುವ ಪರಿಸ್ಥಿತಿ ಬಂದಿದೆ. ಒತ್ತುವರಿ ತೆರವುಗೊಳಿಸಿ ಪಾದಚಾರಿಗಳಿಗೆ ದಾರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕೆಲವು ಶಾಲೆಗಳ ಪಕ್ಕದಲ್ಲೇ ವೈನ್ ಸ್ಟೋರ್ ಇರುವುದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಪಕ್ಕದ ಮದ್ಯದ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಪೋಷಕರು ಮನವಿ ಮಾಡಿದರು. ಇನ್ನೂ ಕೆಲವು ಗ್ರಾಮಗಳಲ್ಲಿ ಜಾತಿ-ಕುಟುಂಬ ಕಲಹದ ಹೆಸರಿನಲ್ಲಿ ಬಹಿಷ್ಕಾರಗಳು ಹೆಚ್ಚಾಗುತ್ತಿವೆ. ಬಹಿಷ್ಕಾರ ಪದ್ಧತಿ ಕಾನೂನುಬಾಹಿರ. ಗ್ರಾಮದ ಮುಖಂಡರಿಗೆ ಎಚ್ಚರಿಕೆ ನೀಡಿ ಬಹಿಷ್ಕಾರ ಮಾಡದಂತೆ ತಡೆಯಬೇಕು ಎಂದು ಆಗ್ರಹಿಸಿದರು. ತಾಲ್ಲೂಕಿನಲ್ಲಿ ಜೂಜಾಟ, ಕಳ್ಳತನ, ದರೋಡೆ, ಗಾಂಜಾ ಮಾರಾಟದಂತಹ ಚಟುವಟಿಕೆಗಳು ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿವೆ. ಇವುಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ, “ಪೊಲೀಸ್ ಇಲಾಖೆ ಜನರಿಗಾಗಿ ಇದೆ. ಸಾರ್ವಜನಿಕರ ಸಮಸ್ಯೆ ನಮ್ಮ ಸಮಸ್ಯೆ. ಫುಟ್ಪಾತ್ ಒತ್ತುವರಿ ತೆರವಿಗೆ ಸಿಪಿಐ, ಪಿಎಸ್ಐಗಳಿಗೆ ಸೂಚನೆ ನೀಡುತ್ತೇನೆ. ಶಾಲೆಯ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ ಇದ್ದರೆ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಗ್ರಾಮ ಬಹಿಷ್ಕಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಜೂಜು, ಗಾಂಜಾ ದಂಧೆ ನಡೆಸುವವರ ಪಟ್ಟಿ ಮಾಡಿ ದಾಳಿ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿದರು. ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ. ಜನರ ರಕ್ಷಣೆ ನಮ್ಮ ಆದ್ಯತೆ” ಎಂದು ಎಸ್.ಪಿ ಹೇಳಿದರು.
ಈ ಸಂದರ್ಭದಲ್ಲಿ ಎಎಸ್ ಪಿ ಮಲ್ಲಿಕ್, ಡಿವೈಎಸ್ಪಿ ಧರ್ಮೇಂದ್ರ, ಕಂದಾಯ ಇಲಾಖೆಯ ಆಡಳಿತ ಅಧಿಕಾರಿ ರಾಜು, ಇನ್ಸ್ಪೆಕ್ಟರ್ ರವೀಂದ್ರ, ಗ್ರಾಮಾಂತರ ವೃತ್ತ ನಿರೀಕ್ಷಕ ಆನಂದ್, ಪಿಎಸ್ಐ ಚೇತನ್ ಕುಮಾರ್, ಕೃಷ್ಣಕಾಂತಕೋಳಿ, ಕರಿಬಸಪ್ಪ ಸೇರಿದಂತೆ ಸಭೆಯಲ್ಲಿ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

