ನಂಜನಗೂಡು: ನಂಜನಗೂಡು ತಾಲ್ಲೂಕಿನ ಬಸವಟ್ಟಿಗೆ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಕಂದಾಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ಮತ್ತು ಟೇಬಲ್ಗಳನ್ನು ವಿತರಿಸಿ ಮಕ್ಕಳ ಮನಗೆದ್ದರು. ದೊಡ್ಡಕವಲಂದೆ ನಾಡಕಛೇರಿಯ ಉಪ ತಹಶೀಲ್ದಾರ್ ಕಿರಣ್ ಕುಮಾರ್ ಮತ್ತು ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಅವರು ಪ್ರತಿ ವರ್ಷವೂ ಕಂದಾಯ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ, ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ಕಳೆದ ಬಾರಿ ಹರಗನಪುರ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಇದೇ ರೀತಿ ಕಾರ್ಯಕ್ರಮ ರೂಪಿಸಿದ್ದರು. ಈ ವರ್ಷ ಬಸವಟ್ಟಿಗೆ ಗ್ರಾಮದ ಶಾಲೆ ಆಯ್ಕೆಯಾಗಿದೆ. ಮಕ್ಕಳಿಗೆ ನೋಟ್ ಬುಕ್, ಪೆನ್, ಪುಸ್ತಕ ಹಾಗೂ ಅಧ್ಯಯನಕ್ಕೆ ಅನುಕೂಲವಾಗುವಂತೆ ಟೇಬಲ್ಗಳನ್ನು ನೀಡಲಾಯಿತು.
ಉಪ ತಹಶೀಲ್ದಾರ್ ಕಿರಣ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತೇಜನ ನೀಡಲು ಕಂದಾಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾಗಬೇಕು ಎಂಬ ಉದ್ದೇಶದಿಂದ ವಿನೂತನವಾಗಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ.
ನಮಗೆ ಬರುವ ಸಂಬಳದಲ್ಲಿ ಒಂದು ಭಾಗವನ್ನು ಪ್ರತಿ ವರ್ಷವೂ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ಕಂದಾಯ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಗೆ ಮೀಸಲಿಡುತ್ತೇವೆ. ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಶಾಲಾ ಮಕ್ಕಳ ಮುಖದಲ್ಲಿ ನಗು ಮೂಡಿಸುವುದೇ ನಮ್ಮ ನಿಜವಾದ ಸಂಭ್ರಮ ಎಂದು ಹೇಳಿದರು. ಬಳಿಕ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಮಾತನಾಡಿ, ಸರ್ಕಾರಿ ಅಧಿಕಾರಿಗಳ ಸೇವೆ ಕೇವಲ ಕಡತಕ್ಕೆ ಸೀಮಿತವಾಗಬಾರದು. ನಮಗೆ ಬರುವ ಸಂಬಳ ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ. ಸಮಾಜಕ್ಕೆ ಮರಳಿ ಕೊಡುವ ಕರ್ತವ್ಯವೂ ನಮ್ಮ ಮೇಲಿದೆ.
ಅದಕ್ಕಾಗಿ ಪ್ರತಿ ವರ್ಷ ಕಂದಾಯ ದಿನಾಚರಣೆಯನ್ನು ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡುತ್ತೇವೆ. ಸರ್ಕಾರಿ ಶಾಲಾ ಮಕ್ಕಳೇ ನಮ್ಮ ನಿಜವಾದ ಆಸ್ತಿ. ಅವರ ಕೈಗೆ ಪುಸ್ತಕ ಕೊಟ್ಟು, ಮುಖದಲ್ಲಿ ನಗು ಮೂಡಿಸಿದಾಗ ನಮಗೆ ಆಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಗ್ರಾಮೀಣ ಭಾಗದ ಬಡ ಮಕ್ಕಳು ಮುಂದೆ ಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈ ಸೇವಾ ಕಾರ್ಯಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಸಾಥ್ ನೀಡಿದರು. ಮಕ್ಕಳು ಹಾಗೂ ಪಾಲಕರು ಅಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಸರ್ಕಾರಿ ಅಧಿಕಾರಿಗಳು ಕಂದಾಯ ದಿನಾಚರಣೆಯನ್ನು ಕೇವಲ ಔಪಚಾರಿಕತೆಗೆ ಸೀಮಿತ ಮಾಡದೆ, ಸಮಾಜಮುಖಿ ಸೇವೆಗೆ ಬಳಸಿಕೊಂಡಿದ್ದು ಮಾದರಿಯಾಗಿದೆ ಎಂದು ಗ್ರಾಮಸ್ಥರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ನಾಗರಾಜು, ಶಿಕ್ಷಕಿ ಗಿರಿಜಾ, ಗ್ರಾಮ ಆಡಳಿತ ಅಧಿಕಾರಿಗಳಾದ ಸಿದ್ದಾರ್ಥ್, ನಾಗೇಶಪ್ಪ, ಶೃತಿ , ರಕ್ಷಿತಾ, ಮೋನಿಕಾ, ಸಂಪತ್ ಕುಮಾರ್, ಮೋಹನ್ ಕುಮಾರ್, ಇಮಂತ್ ಕುಮಾರ್ ಗ್ರಾಮ ಸಹಾಯಕರಾದ ಮಂಜು, ಮಹೇಶ್ವರಿ, ರೇಖಾ, ಸುಬ್ಬಯ್ಯ, ಸೌಭಾಗ್ಯ, ಶಿವಕುಮಾರ್ ಸೇರಿದಂತೆ ಮಕ್ಕಳು ಹಾಜರಿದ್ದರು.
ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಅವರ ಮಾತು ಹಾಗೂ ಸೇವಾ ಮನೋಭಾವಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು, ಶಾಲಾ ಸಿಬ್ಬಂದಿ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಅಧಿಕಾರಿಗಳು ತಮ್ಮ ಸಂಬಳದಿಂದ ಮಕ್ಕಳಿಗೆ ನೆರವು ನೀಡುತ್ತಿರುವುದು ಮಾದರಿಯಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ನಾಗರಾಜು ಹೇಳಿದರು.

