ನಂಜನಗೂಡು: ಅಂಗನವಾಡಿ ಕೇಂದ್ರ, ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಸರ್ಕಾರದ ಕಡೆ ಬೊಟ್ಟು ಮಾಡದೆ ಸಾರ್ವಜನಿಕರಾದ ನಾವೆಲ್ಲರೂ ಕೈ ಜೋಡಿಸಬೇಕು, ಆಗಲೆ ನಮ್ಮ ಮಕ್ಕಳ ಹಾಗೂ ಗ್ರಾಮಗಳ ಸಾಮೂಹಿಕ ಅಭಿವೃದ್ದಿ ಸಾಧ್ಯ ಎಂದು ಪ್ರತಿಬಿಂಬ ಟ್ರಸ್ಟ್ ಅಧ್ಯಕ್ಷ ಮುರಳಿ ವಿ ರಾವ್ ಹೇಳಿದರು.
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳುವ ಚೇರು ಇನ್ನಿತರೆ ಪೀಠೋಪಕರಣಗಳನ್ನು ಪ್ರತಿಬಿಂಬ ಟ್ರಸ್ಟ್ ಅಧ್ಯಕ್ಷ ಮುರಳಿ ವಿ ರಾವ್ ವಿತರಿಸಿ, ಮಾತನಾಡಿದರು.
ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿನ ಚಟುವಟಿಕೆಗಳು, ಕಲಿಕಾ ಪ್ರಕ್ರಿಯೆಗಳು ಮಗುವಿನ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸರ್ಕಾರ ಮಾತ್ರವಲ್ಲ ಸಾರ್ವಜನಿಕರು ಅಂಗನವಾಡಿ ಕೇಂದ್ರದ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದರು.
ಬಳಿಕ ಕವಲಂದೆ ಗ್ರಾ.ಪಂ ಉಪಾಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಟೋಟ ಹಾಗೂ ಕಲಿಕಾ ಚಟುವಟಿಕೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೆರವು ನೀಡುವ ಮೂಲಕ ತಮ್ಮ ಮಕ್ಕಳ ಸರ್ವತೋಮುಖ ಅಭಿವೃದ್ದಗೆ ಶ್ರಮಿಸಬೇಕು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಗತ್ಯವಾದ ಮೂಲ ಸೌಕರ್ಯಗಳಲ್ಲಿ ಒಂದಾದ ಕೂರುವ ಚೇರುಗಳನ್ನು ಮತ್ತು ಟೇಬಲ್ ಸೇರಿದಂತೆ ಪೀಠೋಪಕರಣಗಳನ್ನು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಿರುವುದು ಸಂತಸ ತಂದಿದೆ. ಎಲ್ಲ ಅಗತ್ಯಗಳನ್ನು ಪೂರೈಸಲು ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಉಳ್ಳವರು ಮುಂದಾಗಬೇಕು, ನಿಮ್ಮ ಕಾರ್ಯ ಇತರರಿಗೆ ಸ್ಪೂರ್ತಿಯೂ ಪ್ರೇರಣೆಯೂ ಆಗಬೇಕು. ಪ್ರತಿಬಿಂಬ ಟ್ರಸ್ಟ್ ಇದೇ ರೀತಿ ಸಾಮಾಜಿಕ ಸೇವೆಗಳನ್ನು ಮಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಬಿಂಬ ಟ್ರಸ್ಟ್ ಅಧ್ಯಕ್ಷ ಮುರಳಿ ವಿ. ರಾವ್, ಪ್ರತಿಬಿಂಬ ಟ್ರಸ್ಟ್ ಸದಸ್ಯರಾದ ನವೀನ್, ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷ ಸಿ.ಮಂಜುನಾಥ್, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಅನ್ವರ್ ಪಾಷಾ, ಮಹದೇವಣ್ಣ, ಜಿ.ಎಂ.ಮಹದೇವಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಲತಾ, ರೇಷ್ಮಾತಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

