ನಂಜನಗೂಡು: ಹಸುಗಳನ್ನು ಕಟ್ಟಿದ್ದಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಂಜನಗೂಡು ತಾಲ್ಲೂಕಿನ ಸಿಂಗಾರಿಪುರ ಗ್ರಾಮದಲ್ಲಿ ನೆರೆಮನೆಯವರಿಂದಾದ ಹಲ್ಲೆಯಲ್ಲಿ ತಂದೆ ಆಸ್ಪತ್ರೆ ಸೇರಿದ್ರೆ, ಮಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸಿಂಗಾರಿಪುರ ಗ್ರಾಮದ ಶಂಕರ 45 ಹಲ್ಲೆಗೊಳಗಾದ ವ್ಯಕ್ತಿ, ನಾಗೇಂದ್ರ 18 ಅಪ್ರಾಪ್ತ ಬಾಲಕ ಮೃತ ದುರ್ದೈವಿ. ಹಸು ಕಟ್ಟುವ ವಿಚಾರಕ್ಕೆ 9 ಜನರ ಗುಂಪಿನಿಂದ ಹಲ್ಲೆಗೊಳಗಾದ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ, ಗಾಯಾಳುವಿನ ಅಪ್ರಾಪ್ತ ಪುತ್ರನ ಶವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಕರಣ ಸಂಬಂಧ 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ. ಮನೆಯ ಮುಂದೆ ಹಸುಗಳನ್ನು ಕಟ್ಟುವ ವಿಚಾರವಾಗಿ ಅಕ್ಕಪಕ್ಕದ ಮನೆಯ 9 ಜನರ ಗುಂಪು ಶಂಕರ ಅವರ ಮೇಲೆ ಹಲ್ಲೆ ನಡೆಸಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಶಂಕರ ಅವರನ್ನು ಆಸ್ಪತ್ರೆಗೆ ದಾಖ ಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ನಿನ್ನ ಅಪ್ಪನನ್ನು ಸಾಯುವ ಹಾಗೇ ಹೊಡೆದಿದ್ದೇವೆ. ನೀನು ಬದುಕಿರುವ ಬದಲು ಸಾಯುವುದೇ ಮೇಲು ಎಂದು ಕಿಡಿಗೇಡಿಗಳು ಬಾಲಕ ನಾಗೇಂದ್ರನನ್ನು ಪ್ರಚೋದಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಆತ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ತಾಯಿ ಲಕ್ಷ್ಮೀ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

