ನಂಜನಗೂಡು: ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ್ ರವರು ಈ ಭಾಗದಲ್ಲಿ ಒಂದು ಶಕ್ತಿಯಾಗಿದ್ದರು. ಅವರ ಪುತ್ರ ದರ್ಶನ್ ರವರ ರೂಪದಲ್ಲಿ ನೋಡುತ್ತಿದ್ದೇವೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.
ನಂಜನಗೂಡು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿವಂಗತ ಆರ್ ಧ್ರುವನಾರಾಯಣ್ ರವರ 64ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಮತ್ತು ಆರೋಗ್ಯ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ಟ್ರಸ್ಟ್ ಮೂಲಕ ಉದ್ಯೋಗ ಮೇಳ ಮತ್ತು ಆರೋಗ್ಯ ತಪಾಸಣೆ ನಡೆಸುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಈ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮೇಳ ಒಂದು ಆಶಾಕಿರಣವಾಗಿದೆ. ಪ್ರತಿ ವರ್ಷ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶಗಳು ದೊರಕುತ್ತಿವೆ. ಇದರ ಜೊತೆಗೆ ಕೆಲವು ಸಂಸ್ಥೆಗಳ ಮೂಲಕ ಆರೋಗ್ಯ ಶಿಬಿರವನ್ನು ಏರ್ಪಡಿಸಿರುವುದು ಉತ್ತಮ ಬೆಳವಣಿಗೆ.
ಇಡೀ ರಾಷ್ಟ್ರದಲ್ಲಿ ಉದ್ಯೋಗ ಕೊಡುವ ಸ್ಥಾನದಲ್ಲಿ ಕರ್ನಾಟಕವು ಕೂಡ ಮೊದಲನೇ ಸ್ಥಾನದಲ್ಲಿದೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶಗಳಿಂದ ಕರ್ನಾಟಕಕ್ಕೆ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ. ನಂಜನಗೂಡು ಪ್ರಮುಖವಾಗಿ ಹಲವು ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ನಂಜನಗೂಡು ರಸಬಾಳೆ, ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಇರುವುದು ಎಲ್ಲರಿಗೂ ಆಶೀರ್ವಾದ ಮಾಡುತ್ತಿದ್ದಾನೆ. ನಂಜನಗೂಡಿನ ಮಣ್ಣಿನಲ್ಲಿ ಮಾತ್ರ ರಸಬಾಳೆ ಬೆಳೆಯುತ್ತದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು. ನಂದಿನಿ ಹಾಲನ್ನು ಹೆಚ್ಚಾಗಿ ಬಳಸುವುದರಿಂದ ಕರ್ನಾಟಕದ ಹಾಲು ಉತ್ಪಾದಕರ ಆರ್ಥಿಕ ಗುಣಮಟ್ಟ ಹೆಚ್ಚುತ್ತದೆ. ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದು ಮತ್ತು ಉದ್ಯೋಗದ ಕಡೆ ಪ್ರಾಮುಖ್ಯತೆ ಕೊಡಬೇಕು ಎಂದರು.
ಉದ್ಯೋಗ ಮೇಳವನ್ನು ಉದ್ಘಾಟಿಸಿ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶಾಸಕ ದರ್ಶನ್ ಧ್ರುವನಾರಾಯಣ್ ತಂದೆಯ ಹಾದಿಯಲ್ಲಿ ನಡೆದು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಧ್ರುವ ನಾರಾಯಣ್ ರವರು ರಾಜಕೀಯ ಶಕ್ತಿಯಾಗಿದ್ದರು. ಕಷ್ಟಪಟ್ಟು ಸ್ವಂತ ಪ್ರತಿಭೆಯಿಂದ ಮೇಲೆ ಬಂದವರು. ನಾನು ರಾಜಕೀಯಕ್ಕೆ ಬಂದ ಸಂದರ್ಭದಲ್ಲಿ ನನಗೂ ಕೂಡ ಮಾರ್ಗದರ್ಶಕರಾಗಿ ನಿಂತಿದ್ದರು.
ಸಾಮಾನ್ಯ ಜನರು ಸೇರಿದಂತೆ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಹೊಸದಾಗಿ ರಾಜಕೀಯ ಮಾಡುವವರಿಗೆ ಸ್ಪೂರ್ತಿಯಾಗಿದ್ದರು. ಜಾತಿ ಭೇದ ಮಾಡದೆ ಎಲ್ಲಾ ವರ್ಗದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇಂದು ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ನೆನಪಿನಲ್ಲಿ ಉಳಿಯುವಂತ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಇಂತಹ ಕಾರ್ಯಕ್ರಮಗಳು ಜನರಿಗೆ ಬಹಳ ಉಪಯೋಗವಾಗುತ್ತವೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಯುವಕ ಯುವತಿಯರಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಆರೋಗ್ಯ ಮೇಳವನ್ನು ಕೂಡ ಆಯೋಜಿಸಿದ್ದೇವೆ. ಇದು ಒಂದು ದಿನದ ಕೆಲಸವಲ್ಲ. ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಕಂಪನಿಗಳು ಬಂದಿವೆ. ಈ ವೇದಿಕೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಧ್ರುವನಾರಾಯಣ್ ರವರು ಸಂಸದರಾಗಿದ್ದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಕಾನೂನು ಕಾಲೇಜು, ಕೃಷಿ ವಿಶ್ವ ವಿದ್ಯಾಲಯ ಅವರ ಕಾಲಾವಧಿಯಲ್ಲಿ ಪ್ರಾರಂಭವಾಗಿವೆ. ತಂದೆಯವರ ಕನಸನ್ನು ನನಸು ಮಾಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಉದ್ಯೋಗ ಮೇಳಕ್ಕೆ ಆಗಮಿಸಿದ ಉದ್ಯೋಗಕಾಂಕ್ಷಿಗಳಿಗೆ ಮೂರು ದಿನಗಳ ಸಂದರ್ಶನ ತರಬೇತಿಯಲ್ಲಿ ಭಾಗವಹಿಸಿದ ನೂರಾರು ಯುವಕ ಯುವತಿಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ನಂತರ ಅಂಗವಿಕಲರಿಗೆ ದ್ವಿಚಕ್ರ ವಾಹನವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಮಾಜಿ ಸಂಸದರಾದ ಚಂದ್ರಪ್ಪ, ಮುದ್ದು ಹನುಮೇಗೌಡ, ಮಾಜಿ ಶಾಸಕರಾದ ನರೇಂದ್ರ, ಕಳಲೆ ಕೇಶವ ಮೂರ್ತಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿಜೆ ವಿಜಯ್ ಕುಮಾರ್, ಕಾಡ ಅಧ್ಯಕ್ಷ ಮರಿಸ್ವಾಮಿ ರವರು, ಕೆಪಿಸಿಸಿ ನಂಜನಗೂಡು ಉಸ್ತುವಾರಿ ಶ್ರೀಕಂಠು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾವೇರಪ್ಪ, ಎಸ್. ಸಿ ಬಸವರಾಜ್, ಸಹೋದರ ಧೀರೆನ್ ಧ್ರುವನಾರಾಯಣ್, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ. ಎಂ ಶಂಕರ್ ಶ್ರೀಕಂಠ ನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ಮಹಿಳಾ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಪ್ರತಿಮಾ ಪ್ರಸಾದ್, ಕಾಲೇಜಿನ ಪ್ರಾಂಶುಪಾಲರಾದ ಕೆಂಪೇಗೌಡ ಸೇರಿದಂತೆ ಆರ್. ಧ್ರುವನಾರಾಯಣ್ ಅಭಿಮಾನಿ ಬಳಗದ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

