ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದಲ್ಲಿ ಭಕ್ತರ ಭಕ್ತಿಭಾವ ಮತ್ತೊಮ್ಮೆ ಸಾಬೀತಾಗಿದೆ. ಕೇವಲ 28 ದಿನಗಳಲ್ಲಿ ಭಕ್ತರು ಅರ್ಪಿಸಿದ ಕಾಣಿಕೆ ಬರೋಬ್ಬರಿ 99.04 ಲಕ್ಷ ತಲುಪಿದೆ.

ದೇವಾಲಯದ ದಾಸೋಹ ಭವನದ ಆವರಣದಲ್ಲಿ 36 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ನಗದು 99,04,57 ರೂ. 10 ಗ್ರಾಂ ಚಿನ್ನ, 950 ಗ್ರಾಂ ಬೆಳ್ಳಿ, 12 ನೋಟುಗಳು ವಿದೇಶಿ ಕರೆನ್ಸಿ ಲಭ್ಯವಾಗಿದೆ. ಹುಂಡಿಯಲ್ಲಿ ಕೇವಲ ಹಣ ಮಾತ್ರವಲ್ಲ, ದೇಶ-ವಿದೇಶದ ಭಕ್ತರ ಕಾಣಿಕೆಯೂ ಪತ್ತೆಯಾಗಿದೆ.

ಅಮೆರಿಕ 4 ಡಾಲರ್, ಕತಾರ್ 3 ರಿಯಲ್, ಕೆನಡಾ 2 ಡಾಲರ್, ಅರಬ್ ಎಮಿರೇಟ್ಸ್ 2 ದಿರ್ಹಮ್, ನ್ಯೂಜಿಲೆಂಡ್ 1 ಡಾಲರ್ ಸೇರಿದಂತೆ ಒಟ್ಟು 12 ವಿದೇಶಿ ಕರೆನ್ಸಿಗಳು ದೊರೆತಿವೆ. ಚಿನ್ನ-ಬೆಳ್ಳಿ ಆಭರಣಗಳು ಕೂಡ ಭಕ್ತರು ದೇವರ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿಯಾಗಿವೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜೆ. ಕೃಷ್ಣ ಮಾತನಾಡಿ, “28 ದಿನಗಳ ಅವಧಿಯಲ್ಲಿ 36 ಹುಂಡಿಗಳಿಂದ 99,04,570 ನಗದು, 10 ಗ್ರಾಂ ಚಿನ್ನ, 950 ಗ್ರಾಂ ಬೆಳ್ಳಿ ಹಾಗೂ 12 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ ಎಂದು ತಿಳಿಸಿದರು.