ನಂಜನಗೂಡು: ಆಷಾಢ ಮಾಸದ ಮೊದಲನೇ ಶುಕ್ರವಾರದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು.
ಇಂದು ಬೆಳಿಗ್ಗೆಯಿಂದಲೇ ನಂಜನಗೂಡು ಪಟ್ಟಣವು ಸೇರಿದಂತೆ ವಿವಿದೆಡೆಯಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ಬಂದು ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ತಮ್ಮ ಭಕ್ತಿ ಭಾವ ಮೆರೆದರು.
ಆಷಾಡ ಶುಕ್ರವಾರದ ಪ್ರಯುಕ್ತ ದೇವಾಲಯದ ಒಳ ಹಾಗೂ ಹೊರ ಆವರಣಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು ಅಲ್ಲದೆ ಅಮ್ಮನವರ ಮೂರ್ತಿಯನ್ನು ಸಹ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಮಹಿಳಾ ಭಕ್ತರು ದೇವಾಲಯದ ಹೊರಗೆ ತಾಯಿ ಚಾಮುಂಡೇಶ್ವರಿ ಅಮ್ಮನಿಗೆ ನಿಂಬೆಹಣ್ಣಿನ ಆರತಿಗೆ ಸಿದ್ಧತೆ ಮಾಡಿಕೊಂಡು ದೇವಾಲಯಕ್ಕೆ ಬಂದು ನಿಂಬೆಹಣ್ಣಿನ ಆರತಿ ಬೆಳಗುತ್ತಿದ್ದದ್ದು ವಿಶೇಷವಾಗಿತ್ತು.
ಇದೇ ಸಂದರ್ಭ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಟಿಎಟಿಸಿಎಂಎಸ್ ಅಧ್ಯಕ್ಷ ಕುರಟ್ಟಿ ಮಹೇಶ್, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಸವೇಗೌಡ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಸೇರಿದಂತೆ ಸಮಿತಿ ಸದಸ್ಯರು ಮತ್ತು ಪುರ ಪ್ರಮುಖರು ಭಾಗವಹಿಸಿದ್ದರು.

