ನಂಜನಗೂಡು: ವಾದ-ವಿವಾದ, ಟೀಕೆ-ಟಿಪ್ಪಣಿ, ಗದ್ದಲ ಗೊಂದಲ ಹಾಗೂ ಆರೋಪಗಳ ನಡುವೆ ದೇವರಸನಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮ ಸಭೆ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯ್ತಿಯ ಲೆಕ್ಕ ಪರಿಶೋಧನಾ ಹಾಗೂ ಗ್ರಾಮ ಸಭೆಯಲ್ಲಿ ಪಿಡಿಓಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಕೈಲಾದ್ರೇ ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ನಡೀರಿ. ಗ್ರಾಪಂ ಸಮಸ್ಯೆಗೆ ಬೇಸತ್ತ ಗ್ರಾಮಸ್ಥರಿಂದ ಪಿಡಿಒ ಮತ್ತು ಇತರೇ ಇಲಾಖೆ ಸರ್ಕಾರಿ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡು ಗ್ರಾ.ಪಂ ಆಡಳಿತಕ್ಕೆ ಮೈ ಚಳಿ ಬಿಡಿಸಿದ್ದಾರೆ.
ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ಹಾಗೂ ಉಪಾಧ್ಯಕ್ಷ ನಂಜನಪ್ಪ ಸೇರಿದಂತೆ ಸದಸ್ಯರು ಮತ್ತು ಅಧಿಕಾರಿಗಳ ಸಮ್ಮಖದಲ್ಲಿ ಸಭೆ ನಡೆಸಲಾಗಿದ್ದು, ಆರಂಭಕ್ಕೂ ಮುನ್ನವೇ, ಇಒ ಸಭೆಗೆ ಬಂದಿಲ್ಲ, ಇಒ ಜೆರಾಲ್ಡ್ ರಾಜೇಶ್ ಅವರನ್ನು ಸಭೆಗೆ ಕರೆಸಿ ಇಲ್ಲವಾದಲ್ಲಿ ಸಭೆಯನ್ನು ರದ್ದುಗೊಳಿಸುವಂತೆ ಸದಸ್ಯರು ಮತ್ತು ಗ್ರಾಮಸ್ಥರು ಪಟ್ಟು ಹಿಡಿದರು.
ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತಿದ್ದು, ಸಂಬಂಧ ಪಟ್ಟ ಹಲವು ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಗಳೇ ಇಲ್ಲದ ಮೇಲೆ ಸಭೆ ಯಾಕೆ ಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

