ನಂಜನಗೂಡು: ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದ ಆಯೋಗ ಸಲ್ಲಿಸಿರುವ ಒಳ ಮೀಸಲಾತಿ ವರದಿಯನ್ನು ಸರ್ಕಾರ ತಿರಸ್ಕಾರ ಮಾಡಬೇಕು ಎಂದು ನಂಜನಗೂಡಿನಲ್ಲಿ ಬಲಗೈ ಸಂಬಂಧಿಸಿದ ಜಾತಿಗಳ ಕ್ರಿಯಾ ಸಮಿತಿ ನಂಜನಗೂಡು ಒತ್ತಾಯಿಸಿದೆ.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಬಲಗೈ ಸಮುದಾಯಗಳ ಸಂಬಂಧಿಸಿದ ಜಾತಿಗಳ ದುಂಡು ಮೇಜಿನ ಸಭೆ ನಡೆಸಲಾಯಿತು. ಸಭೆಯಲ್ಲಿ ಹೊಲೆಯ, ಛಲವಾದಿ, ಆದಿ ಕರ್ನಾಟಕ ಜಾತಿಗಳ ಬಗ್ಗೆ ವಿಮರ್ಶೆ ಮತ್ತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.
ನಂತರ ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ ಎಡಗೈ ಸಮುದಾಯ ಹೆಚ್ಚಾಗಿದೆ ಎಂದು ನಾಗಮೋಹನ್ ದಾಸ್ ಆಯೋಗ ವರದಿ ನೀಡಿದೆ. ರಾಜ್ಯದಲ್ಲಿ ಬಲಗೈ ಸಮುದಾಯ ಹೆಚ್ಚಿದೆ. ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಹೊಲಯ ಸಮುದಾಯ ತನ್ನ ಜಾತಿಯನ್ನು ಹೇಳಿಕೊಂಡರೆ ನಮಗೆ ಬಾಡಿಗೆ ಮನೆ ಸಿಗುವುದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮತ್ತೊಂದು ಕಡೆ ಜಾತಿ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿಲ್ಲ. ಒಳ ಪಂಗಡಗಳನ್ನು ವಿಂಗಡಣೆ ಮಾಡಿ, ಜಾತಿ ಅಲ್ಲದೆ ಇರುವುದನ್ನು ಜಾತಿ ಎಂದು ಮಾಡಿ ಬಲಗೈ ಸಮುದಾಯಕ್ಕೆ ನಷ್ಟವಾಗಿದೆ.
ಆ. 16ರಂದು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ವರದಿಯನ್ನು ತಿರಸ್ಕಾರ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ನಾವು ಒತ್ತಾಯಿಸುತ್ತೇವೆ. ಹಾಗೆಯೇ ಬಲಗೈ ಸಮುದಾಯದ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲು ಈ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ.
ಅನೇಕ ವರದಿಗಳನ್ನು ಮತ್ತು ಕಾಂತರಾಜ್ ವರದಿಯನ್ನು ಸರ್ಕಾರ ತಿರಸ್ಕಾರ ಮಾಡಿದೆ. ಅದರಂತೆ ನಾಗಮೋಹನ್ ದಾಸ್ ರವರ ಆಯೋಗದ ವರದಿಯನ್ನು ಕೂಡಲೇ ತಿರಸ್ಕಾರ ಮಾಡಬೇಕು. ನಾಗಮೋಹನ್ ದಾಸ್ ವರದಿ ಆಯೋಗ ಬೋಗಸ್ ಆಯೋಗವಾಗಿದೆ. ನಾಗಮೋಹನ್ ದಾಸ್ ರವರ ಆಯೋಗದ ಮೇಲೆ ನಮಗೆ ಬಾರಿ ನಂಬಿಕೆ ಇಟ್ಟುಕೊಂಡಿದ್ದೇವು. ಅವರು ಒಳ ಏಟು ಹಾಕುತ್ತಾರೆ ಎಂದು ಗೊತ್ತಿರಲಿಲ್ಲ. ಮೈಸೂರು ಭಾಗದಲ್ಲಿ ಆದಿ ಕರ್ನಾಟಕ ಹೆಚ್ಚಾಗಿ ಇದೆ. ಇಡೀ ರಾಜ್ಯದಲ್ಲಿ ಆದಿ ಕರ್ನಾಟಕಕ್ಕೆ ಶೇಕಡ ಒಂದರಷ್ಟು ಮೀಸಲಾತಿಯನ್ನು ನೀಡಿದ್ದಾರೆ. ಕೇವಲ ಒಂದು ಪರ್ಸೆಂಟ್ ಕೊಟ್ಟಿದ್ದಾರೆ.
ನಾವು ಶಿಕ್ಷಣವನ್ನು ಹೇಗೆ ಪಡೆದುಕೊಳ್ಳುವುದು. ಶಿಕ್ಷಣವೇ ನಮ್ಮ ಆಸ್ತಿ. ನಮ್ಮ ಬುಡಕ್ಕೆ ಕೈ ಹಾಕಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಜನರು ದಂಗೆ ಹೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾವು ಆಸ್ತಿ ಸಂಪತ್ತು ನಮಗೆ ಬೇಡ ನಮ್ಮ ಮಕ್ಕಳಿಗೆ ಶಿಕ್ಷಣ ಬೇಕು. ಹಾಗಾಗಿ ನಮಗೆ ನಾಗಮೋಹನ್ ದಾಸ್ ರವರ ಆಯೋಗವನ್ನು ತಿರಸ್ಕಾರ ಮಾಡಬೇಕು ಇಲ್ಲವಾದಲ್ಲಿ ನಮ್ಮ ಸಮುದಾಯದ ಸಚಿವರು ಮತ್ತು ಶಾಸಕರಿಗೆ ಇನ್ನೂ ಉಳಿಗಾಲವಿಲ್ಲ. ನಿಮ್ಮ ಕಛೇರಿಗಳಿಗೆ ಮುತ್ತಿಗೆ ಹಾಕಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರಾದ ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಗೀಕಹಳ್ಳಿ ಮಹದೇವಸ್ವಾಮಿ, ಸುರೇಶ್ ಶಂಕರಪುರ, ಜೆ. ಮಹದೇವ್ ಕುಮಾರ್,ಅಭಿನಾಗಭೂಷಣ್, ಶ್ರೀಕಂಠಮೂರ್ತಿ, ವಾಸುದೇವಮೂರ್ತಿ, ರಾಚಪ್ಪ, ಉಪ್ಪನಹಳ್ಳಿ ಶಿವಣ್ಣ, ಬಸವಟ್ಟಿಗೆ ನಾಗೇಂದ್ರ, ಮಂಜು ಶಂಕರಪುರ, ಗಟ್ಟವಾಡಿ ಮಹೇಶ್, ಮಲ್ಲೇಶ್ ಕಪ್ಪಸೋಗೆ, ಕಳಲೆ ರಾಜೇಶ್, ಎಂ.ಡಿ ಬಾಲರಾಜು, ರಾಹುಲ್, ನೇರಳೆ ವಿರೇಂದ್ರ, ಮುಳ್ಳೂರು ಸ್ವಾಮಿ, ಮಂಡ್ಯ ಮಹದೇವ್, ಹಲ್ಲರೆ ಮಹದೇವ್, ನಂಜುಂಡಸ್ವಾಮಿ, ಹೆಚ್.ಎಂ ಚಲುವಸ್ವಾಮಿ, ಸುರೇಶ್, ರಘು ದೇವರಸನಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

