ನಂಜನಗೂಡು: 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಮೊತ್ತವನ್ನು ಕೊಡುವಂತೆ ಒತ್ತಾಯಿಸಿ ಬುಧವಾರ ತಾಲ್ಲೂಕು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

1975 ಅಕ್ಟೋಬರ್ 2 ರಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಶಿಶುವಿನಂತೆ ಇತ್ತು. ಇಂದು ಈ ಯೋಜನೆ ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿ ಸುಮಾರು 50 ಲಕ್ಷ ಫಲಾನುಭವಿಗಳಿದ್ದಾರೆ. ಅಲ್ಲದೆ ಮಾನವ ಸಂಪನ್ಮೂಲಗಳ ಬೆಳವಣಿಗೆಯನ್ನು ಖಾತ್ರಿಪಡಿಸುವ ಯೋಜನೆಯು ಆಗಿದೆ. ಇಂತಹ ಯೋಜನೆಯು ಅಭಿವೃದ್ಧಿಗೆ  75 ಇದರಿಂದ 150  ರೂಗಳಿಗೆ ಸಾವಿರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿದಿದ್ದಾರೆ.

2022 ರಲ್ಲಿ ಸುಪ್ರೀಂ ಕೋರ್ಟ್, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ನೌಕರರಿಗೆ 1972 ನಿಬಂಧನೆಗಳು ಅನ್ವಯವಾಗುತ್ತದೆ ಎಂದು ತೀರ್ಪು ನೀಡಿದೆ. ಈ ತೀರ್ಪನ್ನು ಕರ್ನಾಟಕದಲ್ಲಿ ಜಾರಿ ಮಾಡಬೇಕು ಎಂದು ಚಳುವಳಿ ನಡೆಸಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023ರಲ್ಲಿ ಗ್ರಾಚ್ಯುಟಿ ಜಾರಿ ಮಾಡಿದೆ.

ಈ ಆದೇಶ 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ 10.311 ಅಂಗನವಾಡಿ ಕಾರ್ಯಕರ್ತೆಯರು, 11.980 ಅಂಗನವಾಡಿ ಸಹಾಯಕಿಯರಿಗೂ ಅನ್ವಯಿಸಬೇಕು. ತಕ್ಷಣವೇ ಸರ್ಕಾರ ಅನುದಾನ ಬಿಡುಗಡೆಗೊಳಿಸಿ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಸಿಡಿಪಿಒ ಕೆ.ಎಸ್. ಭವ್ಯಶ್ರೀ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೌಕರರಾದ ಲೀಲಾವತಿ, ಚಂದ್ರಿಕಾ, ಕಮಲಾಕ್ಷಿ, ಹೇಮಾವತಿ, ಶಶಿಕಲಾ, ರಾಜಮಣಿ, ಭಾಗ್ಯ, ಪುಷ್ಪಲತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಿವೃತ್ತ ಸಹಾಯಕಿಯರು ಹಾಜರಿದ್ದರು.