ನಂಜನಗೂಡು: ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಎಂಬಾತನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕರು ಆಗ್ರಹಿಸಿದ್ದಾರೆ.
ನಂಜನಗೂಡು ನಗರದ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಬಳಿಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಯೋಜಕ ಗಟ್ಟವಾಡಿಪುರ ಶಿವರಾಜು ಮಾತನಾಡಿ, ಕೆ.ಆರ್ ಪೇಟೆಯಲ್ಲಿ ನಡೆದ ದಲಿತ ಯುವಕನ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ತಪ್ಪಿತಸ್ಥ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಿಬಿಐ ತನಿಖೆಗೆ ಒಪ್ಪಿಸಬೇಕು. ಮೃತರ ಕುಟುಂಬಕ್ಕೆ ಇಪ್ಪತೈದು ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಸಾಗುವಳಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ನಂಜನಗೂಡು ತಾಲ್ಲೂಕಿನಲ್ಲಿ ದಲಿತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ಇವುಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹುಲ್ಲಹಳ್ಳಿ ಗ್ರಾಮದಲ್ಲಿ ಜಮೀನಿಗೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ದಲಿತರ ಜಮೀನುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಇದನ್ನು ಕಂದಾಯ ಇಲಾಖೆ ತೆರವುಗೊಳಿಸಬೇಕು. ಕಂದೇಗಾಲ ಗ್ರಾಮದಲ್ಲಿ 3.18 ಗುಂಟೆ ಸರ್ಕಾರಿ ಕಟ್ಟೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಸಿಗುವ ಸೌಲಭ್ಯಗಳನ್ನು ಹುಲ್ಲಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ನೀಡದೆ ವಂಚಿಸಲಾಗಿದೆ. ಈ ಕೂಡಲೇ ಅಲ್ಲಿನ ಅಧಿಕಾರಿಯನ್ನು ಅಮಾನತು ಮಾಡಬೇಕು. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ಹೀನರಿಗೆ ನೀಡುತ್ತಿರುವ ಸಹಾಯಧನವನ್ನು 5 ರಿಂದ 10 ಲಕ್ಷಕ್ಕೆ ಏರಿಸಲು ಪ್ರಸ್ತಾವನೆಯನ್ನು ತಾಲ್ಲೂಕು ಆಡಳಿತದಿಂದ ಕಳುಹಿಸಬೇಕು ಹಾಗೂ ನಂಜನಗೂಡು ತಾಲೂಕಿನಲ್ಲಿ ದಲಿತರಿಗೆ ಸ್ಮಶಾನ ಇಲ್ಲದೆ ಪರದಾಡುತ್ತಿದ್ದಾರೆ ಸ್ಮಶಾನ ಜಾಗವನ್ನು ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ಕಳಲೆ ಕುಮಾರ್, ಕೃಷ್ಣಮೂರ್ತಿ, ಸುನೀತಾ ಪ್ರಕಾಶ್, ಶಿವಣ್ಣ, ಕೃಷ್ಣ, ರವಿ ಸಿದ್ದರಾಜು ಚಿಕ್ಕಣ್ಣ ಹಾಜರಿದ್ದರು.

