ನಂಜನಗೂಡು: ಡಾ.ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಂಬೇಡ್ಕರ್ ಅವರು ಬರಿ ಹೆಸರಲ್ಲ. ನಮ್ಮೆಲ್ಲರ ಉಸಿರಾಗಿದ್ದಾರೆ. ಸಂವಿಧಾನದ ಕಾನೂನಿನ ಅಡಿಯಲ್ಲಿ ಕೇಂದ್ರ ಗೃಹ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ಇಂದು ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.
ಅಮಿತ್ ಶಾ ರವರೇ ಅಂಬೇಡ್ಕರ್ ರವರ ಬಗ್ಗೆ ಮಾತನಾಡುವಾಗ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಿ, ಕಾನೂನನ್ನು ಗೌರವಿಸಬೇಕಾದವರೇ ಈ ರೀತಿ ಮಾತನಾಡುತ್ತಾರೆ ಎಂದರೆ ಅವರ ಮನ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ. ದೇವರನ್ನು ಪೂಜಿಸಿ ದೇವದಾಸಿಗಳಾಗಿದ್ದರು. ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಮಹಿಳೆಯರು, ಸಾಮಾನ್ಯ ಪ್ರಜೆಗಳು ಕೂಡ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಖ್ಯಮಂತ್ರಿ , ಅಧಿಕಾರಿಗಳಾಗಲು ಸಾಧ್ಯವಾಯಿತು.
ವೋಟ್ ಬ್ಯಾಂಕ್ ಗೆ ಅಂಬೇಡ್ಕರ್ ರವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮೇಲೆ ಗೌರವ ಇದ್ದರೆ, ಇಂತಹ ದೇಶದ್ರೋಹಿ ಗೃಹ ಸಚಿವ ಅಮಿತ್ ಶಾ ನನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ಉಪವಿಭಾಗೀಯ ಸಂಚಾಲಕರಾದ ಮಂಜು ಶಂಕರಪುರ, ಕೃಷ್ಣಮೂರ್ತಿ, ಸಂಘಟನಾ ಸಂಚಾಲಕರಾದ ಸರಗೂರು ಮರಿಸ್ವಾಮಿ, ಹೊಳೆಯಪ್ಪ, ನಟರಾಜ್, ಸದಸ್ಯರಾದ ಬೆಳಲೆ ಮಹೇಶ್, ತಗಡೂರು ಮಹೇಶ್, ಸೋನಹಳ್ಳಿ ಮಹದೇವಸ್ವಾಮಿ, ಸುರೇಶ್, ಶಂಕರಪುರ ಮಹಾದೇವಸ್ವಾಮಿ, ಕೆಂಪರಾಜು ಸೇರಿದಂತೆ ಇತರರು ಹಾಜರಿದ್ದರು.

