ನಂಜನಗೂಡು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದು ಅಪಮಾನ ಮಾಡಿರುವ ವಕೀಲನನ್ನು ಭಾರತ ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ದಸಂ‌ಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಶಂಕರಪುರ ಸುರೇಶ್ ಮಾತನಾಡಿ, ಸುಪ್ರೀಂ ಕೋರ್ಟ್ ನಲ್ಲಿ ಕಲಾಪ ನಡೆಯುತ್ತಿರುವ ವೇಳೆ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದಿರುವುದನ್ನು ನಮ್ಮ ಸಮಿತಿಯು ತೀರ್ವವಾಗಿ ಖಂಡಿಸುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಪಕ್ಷ ಅಥವಾ ಧರ್ಮಕ್ಕೆ ಸೇರಿದವರಲ್ಲ.

ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆಯ ಮೂಲಕ ಉನ್ನತ ಸ್ಥಾನಕ್ಕೇರಿದವರು. ಅವರ ಮೇಲಿನ ದಾಳಿಯು  ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ  ಕಿಡಿಗೇಡಿ ಕೃತ್ಯವು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ. ಅದು ಸಂವಿಧಾನದ ಮೇಲೆ ಮಾಡಿರುವ  ದಾಳಿಯಾಗಿದ್ದು, ಉನ್ನತ ಹುದ್ದೆಯಲ್ಲಿರುವವರ ಮೇಲೆ ಈ ರೀತಿ ದಾಳಿ ಆದರೆ, ಇನ್ನು ಸಾಮಾನ್ಯ ಜನರ ಗತಿ ಏನು ಎಂಬ ಪ್ರಶ್ನೆ ಮೂಡುತ್ತಿದೆ.

ಜಾತಿ ಮೂಲದ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಮನುವಾದಿಗಳ ಮನಸಲ್ಲಿ ಬೇರೂರಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಹೊಡೆದುಹಾಕಿ ಪರಸ್ಪರ ದೇಶ ಮತ್ತು ಅಸಹಣೆಯನ್ನು ಬಿತ್ತುತ್ತಿರುವ ಮನುವಾದಿ ವಕೀಲನನ್ನು ಕೂಡಲೇ ಬಂಧಿಸಿ ಭಾರತದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಯಶವಂತ ಕುಮಾರ್  , ಮರಿಸ್ವಾಮಿ, ಸುಧನ್, ನವೀನ್, ಅನಿಲ್ ಕುಮಾರ್, ಪ್ರಕಾಶ್, ಧ್ರುವಕುಮಾರ್, ಬಸವರಾಜು ಗೀಕಳ್ಳಿ, ಶಂಕರ, ಶಿವರಾಜು, ರವಿ, ನಟರಾಜು, ಮಹದೇವಸ್ವಾಮಿ, ವಸಂತರಾಜ್ ಸೇರಿದಂತೆ ಹಲವರು ಹಾಜರಿದ್ದರು.