ನಂಜನಗೂಡು: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರ 65ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಂಜನಗೂಡು ಲಯನ್ಸ್ ಕ್ಲಬ್ ಮತ್ತು ಆರ್. ಧ್ರುವನಾರಾಯಣ್ ಎಜುಕೇಷನ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ನನಗೆ ಧ್ರುವನಾರಾಯಣ್ ಅವರು ಮಾರ್ಗದರ್ಶಕರಾಗಿದ್ದರು. ವರುಣ ಕ್ಷೇತ್ರದಲ್ಲಿ ನನಗೆ ಚುನಾವಣೆ ವೇಳೆ ಕ್ಷೇತ್ರದ ಜನರನ್ನು ಪರಿಚಯಿಸಿದರು. ಅವರ ಕೆಲಸ ಕಾರ್ಯಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಜನನಾಯಕ ಹೇಗೆ ಇರಬೇಕು ಎಂದರೆ ಅವರ ರೀತಿ ಇರಬೇಕು. ಭೌತಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮೊಟ್ಟಿಗೆ ಧ್ರುವನಾರಾಯಣ್ ಇದ್ದಾರೆ ಎಂದು ಭಾವನಾತ್ಮಕವಾಗಿ ನೆನಪಿಸಿಕೊಂಡರು.

ನಿರುದ್ಯೋಗದ ಕುರಿತು ಮಾತನಾಡಿದ ಅವರು, ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಆದ್ಯತೆ. ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಅವರು ಮಾಡಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ 70 ಸಾವಿರ ಸರ್ಕಾರಿ ಉದ್ಯೋಗ ಭರ್ತಿ ಮಾಡಲು ಹೊರಟಿದ್ದೇವೆ. ನಮ್ಮ ಸರ್ಕಾರ ಯುವ ಜನತೆಗೆ ಅನುಕೂಲ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಭಾರತ್ ಜೋಡೋ ಯುವಕ ಸಂಘ ಸಂಸ್ಥೆಗಳ ಮೂಲಕ ಯುವಕರಲ್ಲಿ ನಾಯಕತ್ವ ಗುಣ ಬೆಳೆಸಿ ಸಮಾಜ ಕಟ್ಟುವ ಕೆಲಸ ಮಾಡುತ್ತೇವೆ. ಬಿಜೆಪಿ ಕೇಂದ್ರ ಆಡಳಿತದಿಂದ ನಿರುದ್ಯೋಗ ಸಮಸ್ಯೆ, ಬಡತನ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಆಗಬೇಕು. ಆಗ ನಿರುದ್ಯೋಗ ನಿವಾರಣೆ ಆಗಲಿದೆ ಎಂದು ಸಚಿವರು ತಿಳಿಸಿದರು.

ನಂತರ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಕಳೆದ ವರ್ಷ ನಂಜನಗೂಡಿನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ಭಾಗದ ಜನರಿಗೆ ಅನುಕೂಲವಾಗಬೇಕು, ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ಆಗಬೇಕು ಎಂಬ ಉದ್ದೇಶದಿಂದ ಹುಲ್ಲಹಳ್ಳಿಗೆ ತಂದಿದ್ದೇವೆ ಎಂದರು.

2023ರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಇದುವರೆಗೆ 700ಕ್ಕೂ ಹೆಚ್ಚು ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಲಾಗಿದೆ. ಉಚಿತವಾಗಿ ನೀಟ್ ಪರೀಕ್ಷೆ ತರಬೇತಿ, ಸಿಇಟಿಯಲ್ಲಿ ಉತ್ತಮ ತರಬೇತಿ ನೀಡಿ ಮಾರ್ಗದರ್ಶನ ನೀಡಿದ್ದೇವೆ. ಮುಂದಿನ ವರ್ಷವೂ ಈ ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.

ಅವರು ಮತ್ತಷ್ಟು ಮಾತನಾಡಿ, ಆರ್. ಧ್ರುವನಾರಾಯಣ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮೈಸೂರು ಚಾಮರಾಜನಗರ ಭಾಗದಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚು ದಾಖಲಾತಿ ಆಗಬೇಕು. ಕಾಲೇಜಿಗೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಈ ಭಾಗ ಕಾಡಂಚಿನ ಪ್ರದೇಶವಾಗಿರುವುದರಿಂದ ಪ್ರಾಣಿ-ಮಾನವ ಸಂಘರ್ಷ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಸಂಸದ ಸುನಿಲ್ ಬೋಸ್ ಮಾತನಾಡಿ, ಧ್ರುವನಾರಾಯಣ್ ಅವರು ನಮ್ಮೊಟ್ಟಿಗೆ ಇಲ್ಲದಿದ್ದರೂ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ನಿತ್ಯ ಸಂಸದರಾಗಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಅವರಿಗೆ ದೊಡ್ಡ ಕನಸಿತ್ತು. ತಂದೆಯ ಹಾದಿಯಲ್ಲಿ ಅವರ ಪುತ್ರ ದರ್ಶನ್ ಧ್ರುವನಾರಾಯಣ್ ನಡೆಯುತ್ತಿದ್ದಾರೆ. 800 ಕೋಟಿ ಅನುದಾನ ತಂದು ನಂಜನಗೂಡು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಮತದಿಂದ ಗೆದ್ದು ಇತಿಹಾಸ ಸೃಷ್ಟಿಸಿದರು. ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿದ ನಾಯಕರಾಗಿದ್ದರು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಶಾಸಕರಾದ ಅನಿಲ್ ಚಿಕ್ಕಮಾದು, ರಾಜೇಶ್ ಠಾಕೂರ್, ಚಂದ್ರ ಪ್ರಸಾದ್, ಡಾ.ಶ್ರೀಕಂಠ, ಕಾಡ ಅಧ್ಯಕ್ಷ ಮರಿಸ್ವಾಮಿ, ಕಾವೇರಪ್ಪ, ನಂಜುಂಡಸ್ವಾಮಿ, ಚಂದ್ರಪ್ಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮಾಜಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾರುತಿ, ಜಿಪಂ ಮಾಜಿ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠನಾಯಕ, ಕುರಹಟ್ಟಿ ಮಹೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಚಿನ್ನಸ್ವಾಮಿ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಿ ಸ್ಥಳದಲ್ಲೇ ಸಂದರ್ಶನ ನಡೆಸಿದವು. ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಉದ್ಯೋಗ ಮೇಳಕ್ಕೆ ನಿರುದ್ಯೋಗ ಯುವಕ ಯುವತಿಯರು ವಿವಿಧ ಭಾಗಗಳಿಂದ ಆಗಮಿಸಿ ಸದಾ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ನಂತರ ಸಂದರ್ಶನದಲ್ಲಿ ಭಾಗವಹಿಸಿ ಆಯ್ಕೆಯಾದ ಯುವಕ ಯುವತಿಯರಿಗೆ ಉದ್ಯೋಗದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.