ಮೈಸೂರು: ದಟ್ಟಗಳ್ಳಿ ಸಮೀಪದ ‘ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ.

ಘಟನೆ ವೇಳೆ ಪಬ್‌ನಲ್ಲಿದ್ದ ಹಲವರಿಗೆ ಸುಟ್ಟ ಗಾಯಗಳಾಗಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಕಾಣಿಸಿಕೊಂಡ ಪರಿಣಾಮ ದಟ್ಟವಾದ ಹೊಗೆ ಹಬ್ಬಿದ್ದು ಪಬ್ ನಲ್ಲಿರುವ ಗ್ರಾಹಕರು ಅತಂತ್ರಕ್ಕೆ ಸಿಲುಕಿದ್ದಾರೆ.

ಸ್ಫೋಟದ ಬಳಿಕ ಆತಂಕಗೊಂಡ ಕೆಲವರು ಮೇಲಂತಸ್ತಿನಿಂದ ಜಿಗಿದು ಪಾರಾಗಲು ಯತ್ನಿಸಿದ್ದಾರೆ.ಎರಡನೇ ಮಹಡಿಯಲ್ಲಿರುವ ಕಾರಣ ಏಣಿ ಸಹಾಯದಿಂದ ಗ್ರಾಹಕರನ್ನ ರಕ್ಷಿಸಲು ಸ್ಥಳೀಯರು ಮುಂದಾಗಿದ್ದಾರೆ. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.