ನಂಜನಗೂಡು: ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೋಟ್ಯಾಂತರ ಹಣ ಗುಳುಂ ಆಗಿದೆ ಎಂದು ರೈತರು ಆರೋಪಿಸಿ ಹಾಲಿನ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮಂಜು ಕಿರಣ್ ನೇತೃತ್ವದಲ್ಲಿ ರೈತರು ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಸಂಘದ ಮುಖಂಡ ಮಂಜು ಕಿರಣ್ ಮಾತನಾಡಿ, ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 20 ವರ್ಷಗಳಿಂದ ಅವ್ಯವಹಾರ ನಡೆದಿದೆ. ಘಟಕ ಪ್ರಾರಂಭ ಆಗಿನಿಂದಲೂ ಒಬ್ಬರೇ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೆಕ್ಕಪತ್ರಗಳನ್ನು ನೀಡಿಲ್ಲ. ಉತ್ಪಾದಕರಿಗೆ ಬೋನಸ್ ನೀಡಿಲ್ಲ.
ದಾಖಲೆಗಳಲ್ಲಿ ಉತ್ಪಾದಕರಿಗೆ ಬೋನಸ್ ನೀಡಿದ್ದೇವೆ ಎಂದು ತೋರಿಸಿದ್ದಾರೆ. ಆದರೆ, ಉತ್ಪಾದಕರಿಗೆ ಏನು ತಲುಪಿಲ್ಲ ಎಂದು ಆರೋಪಿಸಿದ ಅವರು, ಕಾರ್ಯದರ್ಶಿ ಮಹೇಶ್ ಎಂಬುವರನ್ನು ಈ ಕಾರಣಕ್ಕಾಗಿ ಅಮಾನತು ಮಾಡಿದ್ದಾರೆ. ಅಮಾನತುಆಗಿರುವ ಕಾರ್ಯದರ್ಶಿಯನ್ನು ಇಟ್ಟುಕೊಂಡು ಸಭೆ ನಡೆಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ರಾತ್ರೋರಾತ್ರಿ ಡೈರಿಯನ್ನು ತೆರೆದು ಮೂರರಿಂದ ಐದು ಕೋಟಿಗೂ ಹೆಚ್ಚು ಹಣವನ್ನು ಅವ್ಯವಹಾರ ಮಾಡಿರುವುದು ಕಂಡುಬರುತ್ತದೆ. ಹಾಗೆ ಹಾಲಿನ ಡೈರಿಗೆ ಹೊಸದಾಗಿ ನಿರ್ದೇಶಕರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳಲು ಉತ್ಪಾದಕರು ನಿರ್ಧರಿಸಿದ್ದೇವೆ. ನಮಗೆ ನ್ಯಾಯ ಸಿಗುವ ತನಕ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನೆ ಹೋಲಿಸಿದರು.

