ಮೈಸೂರು: ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಚಿರತೆ ದಾಳಿಗೆ ಹಸುಗೊಂದು ಬಲಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಕೆ.ಎಂ ಚಿಕ್ಕಬಸವಣ್ಣ ಎಂಬವರಿಗೆ ಸೇರಿದ ಸಾವಿರಾರು ರೂಪಾಯಿ ಬೆಲೆ ಬಾಳುವ ಹಸು ಇದಾಗಿದ್ದು, ಎಂದಿನಂತೆ ಜಮೀನಿಗೆ ಹಸುಗಳನ್ನು ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಚಿರತೆ ಏಕಾಏಕಿ ದಾಳಿ ಮಾಡಿ ಕುತ್ತಿಗೆ ಭಾಗವನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ.
ಹಸು ಗಂಭೀರ ಗಾಯಗೊಂಡಿದ್ದ ಪರಿಣಾಮ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ರಮೇಶ್, ಸಾಗರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ನಂತರ ದೊಡ್ಡಕವಲಂದೆ ಪಶು ವೈದ್ಯ ಹರ್ಷ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಯಥೇಚ್ಛವಾಗಿ ಈ ಭಾಗದಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು ಗ್ರಾಮಸ್ಥರು ಜಮೀನುಗಳಿಗೆ ಹೋರಾಡಲು ತುಂಬಾ ತೊಂದರೆಯಾಗಿದೆ. ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

