ನಂಜನಗೂಡು: ಚಿರತೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೋಕೇಶ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಹಸುವಿನ ಹೊಟ್ಟೆ ಮತ್ತು ಕುತ್ತಿಗೆ ಹಾಗೂ ಕಾಲಿನ ಭಾಗದಲ್ಲಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿ, ಹಸುವನ್ನು ಬಲಿ ಪಡೆದು ಪರಾರಿಯಾಗಿದೆ.

ಸುಮಾರು 40 ಸಾವಿರ ರೂಪಾಯಿ ಬೆಳೆಬಾಳುವ ಹಸು ವಾಗಿದ್ದು ರೈತ ಲೋಕೇಶ್ ಗೆ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಇದರಿಂದ ಗ್ರಾಮಸ್ಥರು ಭಯಭೀತಿಯಲ್ಲಿದ್ದಾರೆ.

ರೈತರು ತಮ್ಮ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಚಿರತೆ ಸೆರೆಗೆ ಬೋನು ಇಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.