ನಂಜನಗೂಡು: ವಿದ್ಯುತ್ ಕಂಬದ ಗ್ರೌಂಡಿಂಗ್‌ನಿಂದ ವಿದ್ಯುತ್ ಸ್ಪರ್ಶಗೊಂಡು ರೈತನ ಹಸುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.

ಹೆಡತಲೆ ಗ್ರಾಮದ ರೈತ ಮರಪ್ಪ ಎಂಬುವರಿಗೆ ಸೇರಿದ ಕಪ್ಪು ಬಣ್ಣದ ಇಲಾತಿ ಹಸು ಮೃತಪಟ್ಟಿದೆ. ಮರಪ್ಪ ಅವರು ಬೆಳಿಗ್ಗೆ ಸಮಯದಲ್ಲಿ ಮೂರು ಹಸುಗಳನ್ನು ಮೇಯಿಸಲು ಜಮೀನಿನ ಕಡೆಗೆ ಕರೆದೊಯ್ದಿದ್ದರು.

ಮಧ್ಯಾಹ್ನದಲ್ಲಿ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಜಮೀನಿನ ಸಮೀಪದ ವಿದ್ಯುತ್ ಕಂಬದ ಬಳಿ ಹಸು ತೆರಳಿದ್ದು, ಕಂಬದ ವಿದ್ಯುತ್ ಗ್ರೌಂಡಿಂಗ್‌ನಿಂದ ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಮೃತಪಟ್ಟ ಹಸುವಿನ ಮೌಲ್ಯ ಸುಮಾರು 50 ರಿಂದ 60 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಹಸು ಸಾಕಾಣಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ತನಗೆ ಈ ಘಟನೆಯಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ರೈತ ಮರಪ್ಪ ನೋವು ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತನಗೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಘಟನೆ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.