ಟಿ.ನರಸೀಪುರ: ಪೌರ ಕಾರ್ಮಿಕ ಕುಟುಂಬ ಸರ್ಕಾರಿ ಕರಾಬು ಜಾಗವೆಂದು ಶೆಡ್ ನಿರ್ಮಾಣ ಮಾಡಿದ್ದು ಇದಕ್ಕೆ ಜಮೀನಿನ ಮಾಲೀಕರು ತೀರ್ವ ವಿರೋಧ ವ್ಯಕ್ತಪಡಿಸಿ ಕೂಡಲೇ ತೆರವುಗೊಳಿಸುವಂತೆ ತಾಕೀತು ಮಾಡಿದರು.

ತಾಲ್ಲೂಕಿನ ಮೂಗೂರು ಹೋಬಳಿ ಸಮೀಪದ ಕನ್ನಹಳ್ಳಿ ಎಲ್ಲೆಗೆ ಬರುವ ಎಂ.ಸೀಹಳ್ಳಿ ಗ್ರಾಮದಲ್ಲಿ ಕಳೆದ ನಲವತ್ತು ವರ್ಷಗಳಿಂದ ವಾಸವಾಗಿದ್ದ ಪೌರಕಾರ್ಮಿಕ ಕುಟುಂಬಸ್ಥರು ಊರಿನ ಹೊರವಲಯದಲ್ಲಿ ವಾಸ ಮಾಡಲು ಯೋಗ್ಯವಿಲ್ಲವೆಂದು ಸರ್ಕಾರಿ ಕರಾಬು ಜಾಗವೆಂದು ತಿಳಿದು ಗ್ರಾಮದ ಸರ್ವೇ ನಂ 259/3 ರ ಜಮೀನಿನಲ್ಲಿ ಟೆಂಟ್ ನಿರ್ಮಾಣ ಮಾಡಿದ್ದರು.

ಈ ಸಂಬಂಧ ಜಮೀನಿನ ಮಾಲೀಕರು ದಾಖಲೆಯೊಂದಿಗೆ ಸ್ಥಳಕ್ಕಾಗಮಿಸಿ ಈ ಜಾಗದಲ್ಲಿ ಯಾವುದೇ ಕರಾಬು ಇರುವುದಿಲ್ಲ ಇದು ನನಗೆ ಪಿತ್ರಾರ್ಜಿತವಾಗಿ ಬಂದ ಆಸ್ಥಿಯಾಗಿದ್ದು ಅಕ್ರಮವಾಗಿ ನನ್ನ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡಿದ್ದಾರೆಂದು ಜಮೀನಿನ ಮಾಲೀಕ ಗುರುರಾಜ್ ಆರೋಪಿಸಿ ಆಕ್ಷೇಪಿಸಿದರು.

ಈ ಸಂಬಂಧ ಪೌರ ಕಾರ್ಮಿಕರು ಹಾಗೂ ಜಮೀನಿನ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ಮಾತಿನ ವಾಕ್ಸಮರ ನಡೆದ ಹಿನ್ನಲೆಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಗುರುಮೂರ್ತಿಯವರು ಮದ್ಯ ಪ್ರವೇಶಿಸಿ ಇದು ಸರ್ಕಾರಿ ಕರಾಬು ಜಾಗವೇ ಆಗಿದ್ದು ನನ್ನ ಬಳಿ ಅಗತ್ಯ ದಾಖಲೆಗಳು ಇವೆ.ಪೌರಕಾರ್ಮಿಕರ ಕುಟುಂಬ ಕಳೆದ ನಲವತ್ತು ವರ್ಷಗಳಿಂದ ಗ್ರಾಮಕ್ಕೆ ಸೇವೆ ನೀಡುತ್ತಾ ಬರುತ್ತಿದ್ದಾರೆ.ಅವರು ಹಾಲಿ ವಾಸವಿರುವ ಸ್ಥಳ ವಾಸಕ್ಕೆ ಯೋಗ್ಯವಿಲ್ಲವಾಗಿದೆ.ಆದ್ದರಿಂದ ಸರ್ಕಾರಿ ಜಾಗದಲ್ಲಿ ವಾಸಕ್ಕೆ ಶೆಡ್ ನಿರ್ಮಾಣ ಮಾಡಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ನಂಜಪ್ಪ ಬಸವನಗುಡಿ ಮದ್ಯಪ್ರವೇಶಿಸಿ ಮಾತನಾಡಿ ಸರ್ಕಾರಿ ಜಾಗ ಆಗಿರುವುದರಿಂದ ಅವರು ಶೆಡ್ ನಿರ್ಮಾಣ ಮಾಡಿದ್ದಾರೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪೊಲೀಸ್ ರಕ್ಷಣೆ ನೀಡಬೇಕೆಂದಾಗ ಯಾರೇ ಆದರೂ ಕಾನೂನಿನ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕೆ ಹೊರತು ಕಾನೂನನ್ನು ಮೀರಿ ಯಾವುದನ್ನು ಮಾಡಲು ಸಾಧ್ಯವಿಲ್ಲ.ಏನೂ ಅರಿಯದ ಅಮಾಯಕರನ್ನು ಈ ರೀತಿ ಎತ್ತಿ ಕಟ್ಚಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿದರೆ ನೀವೇ ಹೊಣೆಗಾರರಾಗಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.