ಮೈಸೂರು: ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂದು ನಂಜನಗೂಡಿನಲ್ಲಿ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ.

ನಂಜನಗೂಡು ನಗರದ ರಾಷ್ಟ್ರಪತಿ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಸ್ಥಳ ಪರಿಶೀಲನೆಯನ್ನು ಸಚಿವ ವಿ. ಸೋಮಣ್ಣ ನಡೆಸಿದರು. ರಾಜ್ಯದಲ್ಲಿ ಸಾಕಷ್ಟು ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. 180 ಎಲ್‍ಸಿ ಗಳು ಬಂದಿವೆ. 75 ಎಲ್ ಸಿ ಗಳಿಗೆ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ ಎಂದರು.

25 ವರ್ಷಗಳಿಂದ ತುಂಬ ಸಮಸ್ಯೆ ಆಗಿದೆ. ದೇಶದಲ್ಲಿ ಸಾಕಷ್ಟು ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ್ದೇನೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲೂ ಭೇಟಿ ನೀಡಿದ್ದೇನೆ. ಹಾಗೆ ನಂಜನಗೂಡಿಗೆ ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದರು.

ನಂಜನಗೂಡು ವೇಗವಾಗಿ ಬೆಳೆಯುತ್ತಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದು ಬೇಡ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೆರಡು ತಿಂಗಳ ಒಳಗಾಗಿ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. 2026 ರ ಒಳಗೆ ಕಾಮಗಾರಿ ಮುಗಿಸುತ್ತೇವೆ. ಮೇಲ್ ಸೇತುವೆ ಮಾಡುವಾಗ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನವನ್ನು ನೀಡಿದ್ದಾರೆ. ಆ ಪ್ರದೇಶದ ಜನರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಜನರನ್ನು ಯಾಕೆ ಕರೆದುಕೊಂಡು ಬಂದಿದ್ದೀರಿ ಅಂತ ನನಗೆ ಗೊತ್ತಿಲ್ಲ. ರೈಲ್ವೆ ಮೇಲ್ಸೇತುವೆಯನ್ನು ನೇರವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ರೈಲ್ವೆ ಮೇಲ್ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ನಂಜನಗೂಡಿನಲ್ಲಿ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದರು.