ನಂಜನಗೂಡು: ನಮ್ಮ ದೇಶಕ್ಕೆ ಮಹಾ ಗ್ರಂಥವನ್ನು ನೀಡಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ಮರಿಸಿಕೊಳ್ಳಬೇಕು. ಅವರು ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗದಲ್ಲಿ ತಾಲ್ಲೂಕು ಆಡಳಿತ ಮತ್ತು ಸುಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹಾನ್ ಮಾನವತಾವಾದಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69 ನೇ ಮಹಾ ಪರಿನಿರ್ವಾಣ ದಿನವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಡಾ. ಬಿ. ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ನಾನು ವಕೀಲನಾಗಿದ್ದೇನೆ ಮತ್ತು ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಅಂಬೇಡ್ಕರ್ ರವರೆ ಕಾರಣ. ನಮ್ಮ ದೇಶಕ್ಕೆ ಸಂವಿಧಾನವನ್ನು ಬರೆದು ಕೊಡುಗೆಯಾಗಿ ನೀಡಿದ್ದಾರೆ. ಭಾರತದಲ್ಲಿ ವಿವಿಧ ಜಾತಿ, ಧರ್ಮಗಳು, ಆಚರಣೆ ಇದ್ದರೂ ಸಂವಿಧಾನದಿಂದಲೇ ನಾವು ಒಂದಾಗಿ ನಡೆದುಕೊಂಡು ಹೋಗುತ್ತಿದ್ದೇವೆ. ಮತದಾನದ ಹಕ್ಕನ್ನು ನೀಡಿದ್ದು ಅಂಬೇಡ್ಕರ್ ರವರು. ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ.
ನಮ್ಮ ತಂದೆ ಧ್ರುವನಾರಾಯಣ್ ರವರು ಒಂದು ಮತದ ಮೌಲ್ಯವನ್ನು ಇಡೀ ರಾಷ್ಟ್ರಕ್ಕೆ ತಿಳಿಸಿದರು. ಸಂವಿಧಾನದ ಮೂಲಕ ನಮ್ಮ ಹಕ್ಕುಗಳನ್ನು ನಾವು ಅನುಭವಿಸುತ್ತಿದ್ದೇವೆ. ಬಾಬಾ ಸಾಹೇಬರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಅವರು ವಿಶ್ವ ನಾಯಕರಾಗಿ ಇಡೀ ಮಾನವ ಕುಲಕ್ಕೆ ಅನುಕೂಲವಾಗುವಂತೆ ಸಂವಿಧಾನವನ್ನು ನೀಡಿದ್ದಾರೆ. ದಿನನಿತ್ಯ ಅವರನ್ನು ನಾವು ಸ್ಮರಣೆ ಮಾಡಿಕೊಳ್ಳಬೇಕು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಸುಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ಕರ್ನಾಟಕ ಮೃಗಲಾಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಸಿ ಬಸವರಾಜ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಉಪ್ಪನಹಳ್ಳಿ ಶಿವಣ್ಣ, ಸೇರಿದಂತೆ ಹಲವು ಮುಖಂಡರು ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

