ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಜನತಾದಳದ ವತಿಯಿಂದ ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹುಲ್ಲಹಳ್ಳಿ ವೃತ್ತದಿಂದ ತಾಲ್ಲೂಕು ಆಡಳಿತ ಭವನದವರೆಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಾಲ್ಲೂಕು ಆಡಳಿತ ಭವನದಲ್ಲಿ ಮನವಿ ಸಲ್ಲಿಸಲಾಯಿತು. ಜೆಡಿಎಸ್ ಯುವ ಮುಖಂಡ ಅಭಿಷೇಕ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ರಾಜ್ಯದಲ್ಲಿ ಹೊಸ ಸರ್ಕಾರ ಬಂದು ನೂರು ದಿವಸ ಆಗಿದೆ.
ವೃದ್ಯಾಪ್ಯ ವೇತನ ಕೊಟ್ಟು ಎಷ್ಟು ದಿನ ಆಯ್ತು ಸ್ವಾಮಿ. ಅಂಗವಿಕಲರ ವೇತನ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಆರು ತಿಂಗಳಿಂದ ನೀಡುತ್ತಿಲ್ಲ. ಸಿದ್ದರಾಮಯ್ಯರವರ ನೇತೃತ್ವದಲ್ಲಿ ಮೂರು ತಿಂಗಳು, ನೂತನ ಮುಖ್ಯಮಂತ್ರಿ ನೇತೃತ್ವದಲ್ಲಿ ಮೂರು ತಿಂಗಳು, ಇಡೀ ರಾಜ್ಯದಲ್ಲಿ ಬರ ಘೋಷಣೆಯಾಗಿದೆ.
ತಾಲ್ಲೂಕು ಬರಪೀಡಿತ ಆದಮೇಲೆ ಶಾಸಕರು ಸ್ವಾಗತ ಮಾಡುವುದೇನು, ತಮಟೆ ಹೊಡೆಯುವುದೇನು.. ಘೋಷಣೆ ಮಾಡಿಲ್ಲ ಎಂದು ರಾಜೀನಾಮೆ ಕೊಡುವುದೇನು, ಯಾಕೆ ಈ ನಾಟಕ ಸ್ವಾಮಿ. ಎರಡುವರೆ ಸಾವಿರ ಕೊಡೋಕೆ ಬರ ಘೋಷಣೆ ಆಗಬೇಕಾ ಎಂದು ಪ್ರಶ್ನಿಸಿದ ಅವರು.
ಈ ಹಿಂದೆ ನಮ್ಮ ನಾಯಕರು ಹೆಚ್‍ಡಿ ಕುಮಾರಸ್ವಾಮಿ ಅವರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 3 ಲಕ್ಷ, ಸಹಕಾರ ಕ್ಷೇತ್ರದಲ್ಲಿ 1 ಲಕ್ಷ ಅಂತಹ ಸಂದರ್ಭದಲ್ಲಿ ಕೂಡ ರೈತರ ಸಾಲ ಮನ್ನವನ್ನು ಮಾಡಿದ್ದರು. ದೇಶದ ಮುಖ್ಯಮಂತ್ರಿಗಳಿಗೆ ಮಾದರಿಯಾದರೂ. 135 ಸೀಟು ಕೊಟ್ಟಿದ್ದಾರೆ ನಮ್ಮದು ಸಮ್ಮಿಶ್ರ ಸರ್ಕಾರ. ನಿಮ್ಮತ್ರ ದುಡ್ಡಿಲ್ಲವೇ ಕೆಲಸ ಮಾಡಿ, ದೇವರಾಜ ಅರಸು ಅವರು ಕಾನೂನು ತಂದಿದ್ದರು. ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದರು.
ಎಲ್ಲ ರಾಜಕಾರಣಿಗಳು, ನೌಕರರು ರೈತರು ಎಲ್ಲ ಸಮಾಜದವರತ್ರ ಇಷ್ಟು ಮಾತ್ರ ಭೂಮಿ ಇರಬೇಕು. ಇಷ್ಟು ಮಾತ್ರ ಹಣ ಇರಬೇಕು. ಇಷ್ಟು ಮಾತ್ರ ಆಸ್ತಿರಬೇಕು ಎಂದು ಕಾನೂನನ್ನು ತನ್ನಿ. ಆಗಲಾದರೂ ಈ ಅಜಾಗರು ಕಥೆ ಜನರು ಅನುಭವಿಸುತ್ತಿರುವ ನೋವು ತಪ್ಪುತ್ತದೆ. ನಿಮಗೆ ಗೌರವ ಇದ್ದರೆ ಕೂಡಲೇ ಅಂಗವಿಕಲ ವೇತನ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಮಾತ್ರೆಗೆ ಕೊಡುವ ಹಣವನ್ನು ನೀಡುತ್ತಿಲ್ಲ.
ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕಾಫಿ ಕುಡಿಯೋಕ್ಕೆ 200 ಕೋಟಿ ರೂ. ಖರ್ಚು ಮಾಡುತ್ತಿದ್ದೀರಲ್ಲ ಇದು ನ್ಯಾಯಾನಾ..? ಇದು ಧರ್ಮನ.? ನಿಮ್ಮ ಸರ್ಕಾರ ಉಳಿಯುತ್ತಾದ, ಕೆ ಎಸ್ ಆರ್ ಟಿ ಸಿ ಮುಳುಗೋಯ್ತು. ಮಕ್ಕಳು ಸರಿಯಾಗಿ ಸ್ಕೂಲಿಗೆ ಹೋಗೋಕೆ ಆಗ್ತಾ ಇಲ್ಲ. ಕೂಡಲೇ ಬರ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ರೈತರಿಗೆ ವೈಜ್ಞಾನಿಕ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಬೃಹತ್ ಪಾದಯಾತ್ರೆ ನಡೆಸಲಾಗುತ್ತಿದೆ. ಮುಂದಿನ ಎನ್‌ಡಿಎ ಅಭ್ಯರ್ಥಿಯಾಗಿ ಅಭಿಷೇಕ್ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಸಾ.ರಾ. ಮಹೇಶ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ರೈತರ ಪರವಾಗಿ ಧ್ವನಿ ಎತ್ತಿ ಅವರಿಗೆ ಬರ ಪರಿಹಾರವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು.
ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್, ಹಿರಿಯ ಜೆಡಿಎಸ್ ಮುಖಂಡ ಮಹದೇವ್, ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಸಂಜಯ್ ಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

