ನಂಜನಗೂಡು: ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಿ ಆತನನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ನಂಜನಗೂಡು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದ ಬಳಿ ಜಮಾವಣೆ ಗೊಂಡ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಮಾನವ ಸರಪಳಿ ನಿರ್ಮಿಸಿ, ಅಮಿತ್ ಷಾ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ರವರು ದೇಶದ ರಕ್ಷಣಾಮಂತ್ರಿಯಾಗಿ ಎಲ್ಲಾ ಜನರಿಗೂ ರಕ್ಷಣೆ ನೀಡುವ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು, ಅಂಬೇಡ್ಕರ್ ಅವರ ಹೆಸರನ್ನು ಪದೇಪದೇ ಬಳಸುವುದು ಕೆಲವರಿಗೆ ಶೋಕಿಯಾಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ದೇವರ ಹೆಸರನ್ನು ಬಳಸಿದ್ದರೆ ಇಷ್ಟೊತ್ತಿಗೆ ಏಳು ಜನ್ಮದವರಿಗೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ್ದಾರೆ.

ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಅವರು ಗೃಹ ಸಚಿವರಾಗಿದ್ದಾರೆ ಎಂಬುದನ್ನು ಅವರು ಮರೆತಿರುವಂತಿದೆ. ಅಂಬೇಡ್ಕರ್ ಅವರ ಚಿಂತನೆ ನಮಗೆ ದಾರಿದೀಪ, ದೇಶದ ಮಹಿಳೆಯರು, ಶೋಷಿತರು, ಅಸ್ಪೃಶ್ಯರನ್ನು ರಕ್ಷಣೆ ಮಾಡುತ್ತಿರುವ ಏಕೈಕ ಶಕ್ತಿಯೆಂದರೆ ಅದು ಅಂಬೇಡ್ಕರ್ ರವರ ಮತ್ತು ಅವರ ಸಂವಿಧಾನ ಮಾತ್ರ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ.

ಆದ್ದರಿಂದ ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು ಅಲ್ಲದೆ ಅವರನ್ನು ಸಂಪುಟದಿಂದ ವಜಾಗೊಳಿಸಿ ಆತನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ರಾಷ್ಟ್ರ ವ್ಯಾಪಿ ಉಗ್ರ ಹೋರಾಟವನ್ನು ಹಮ್ಮಿಕೊಂಡು ಬಂದ್ ಮಾಡುವುದಕ್ಕೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಒಂದು ಗಂಟೆಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪರಿಣಾಮ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಗಿತ್ತು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಹಿರಿಯ ರೈತ ಮುಖಂಡ ಬೊಕ್ಕಳ್ಳಿ ನಂಜುಂಡಸ್ವಾಮಿ, ದಲಿತ ಸಂಘಟನೆಗಳ ಒಕ್ಕೂಟದ ಅಭಿನಾಗಭೂಷಣ್, ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಜಯಶಂಕರ್, ಕುಮಾರ್, ಪುಟ್ಟಸ್ವಾಮಿ, ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.