ನಂಜನಗೂಡು: ಆ.31 ರಂದು ನಂಜನಗೂಡಿನಲ್ಲಿ ಮೈಸೂರು ಜಿಲ್ಲಾಡಳಿತ ಹಮ್ಮಿಕೊಂಡಿರುವ ಭಗೀರಥ ಜಯಂತೋತ್ಸವ ಹಾಗೂ ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆಗಮಿಸಲಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಬಳಿ ವೇದಿಕೆ ಕಾರ್ಯಕ್ರಮದ ಸ್ಥಳವನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಆ.31 ರಂದು ನಂಜನಗೂಡಿನಲ್ಲಿ ಅದ್ದೂರಿಯಾಗಿ ಭಗೀರಥ ಜಯಂತೋತ್ಸವವನ್ನು ಆಚರಣೆ ಮತ್ತು ಉಪ್ಪಾರ ಸಮುದಾಯ ಭವನದ ಶಂಕು ಸ್ಥಾಪನೆಯನ್ನು ಮಾಡಲಾಗುತ್ತದೆ.
ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಪಕ್ಷತೀತವಾಗಿ ಆಯೋಜನೆ ಮಾಡಲಾಗಿದ್ದು, ಎಲ್ಲರನ್ನು ಆಹ್ವಾನಿಸುತ್ತೇವೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಉಪ್ಪಾರ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಸುಮಾರು 15 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಅಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಗಳು, ಸಂಸದರು ಶಾಸಕರು ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದ ನಾಯಕರು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಮುಖ್ಯಮಂತ್ರಿಗಳು ವಿಶೇಷ ಅನುದಾನದಡಿಯಲ್ಲಿ 50 ಕೋಟಿ ರೂ. ನೀಡಿದ್ದಾರೆ. ಈ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುತ್ತದೆ. ಕಪಿಲಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಸದನದಲ್ಲಿ ಮಾತನಾಡಿದ್ದೇನೆ. ಹುಲ್ಲಹಳ್ಳಿ ಪ್ರವಾಸಿ ಮಂದಿರವನ್ನು ದುರಸ್ತಿ ಪಡಿಸಲು ಮುಂದಾಗುತ್ತೇವೆ.
ದೇವನೂರು ಏತ ನೀರಾವರಿ ಯೋಜನೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈಗ ಸಮಸ್ಯೆ ಬಗೆಹರಿದಿದೆ. ಟೆಂಡರ್ ಗೆ ಹೋಗಬೇಕಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ಮೀಸಲು ಇಟ್ಟಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಪುರ ನಾಗರಾಜ್, ಸಿದ್ದಶೆಟ್ಟಿ, ಮುದ್ದುಮಾದಶೆಟ್ಟಿ, ಸೋಮಣ್ಣ, ಮೋಹನ್ ಕುಮಾರ್, ಮಂಜು, ರಾಜು, ಚಿನ್ನುಕೃಷ್ಣ ಗೋಳೂರು ಸೇರಿದಂತೆ ಹಲವರು ಹಾಜರಿದ್ದರು.

