ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ ಸಡಗರದಿಂದ ಕೂಡಿದ್ದು, ದೀಪಾಲಂಕಾರದಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್ ಮಿನುಗಿದೆ. ರಾತ್ರಿಯಿಂದಲೇ ಶಾಂತಿಧೂತ ಯೇಸುವಿಗೆ ವಿಶೇಷ ಪೂಜೆ ನಡೆಯುತ್ತಿದೆ.
ನಗರದ ಎಲ್ಲಾ ಚರ್ಚ್ಗಳಲ್ಲಿಯೂ ವಿಶೇಷ ಪ್ರಾರ್ಥನೆ ನಡೆಯುತ್ತಿದೆ. ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್ಮಸ್ ಶುಭಾಶಯ ವಿನಿಮಯವನ್ನು ಕ್ರೈಸ್ತ ಬಾಂಧವರು ಮಾಡಿಕೊಂಡರು. ಕ್ಯಾಥೋಲಿಕ್ ಪ್ರಧಾನ ಚರ್ಚ್ ಸೆಂಟ್ ಫಿಲೋಮಿನಾದಲ್ಲಿ ಕ್ರಿಸ್ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಕರೋಲ್ ಕ್ರೈಸ್ತ ಗೀತೆಗಳನ್ನ ಹಾಡುತ್ತಾ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಮೈಸೂರು ಧರ್ಮಕ್ಷೇತ್ರ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ. ಕ್ರಿಸ್ಮಸ್ ಜಾಗರಣೆ, ಬಲಿಪೂಜೆ ಸಲ್ಲಿಸಲಾಯಿತು.

ರಾತ್ರಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಸು ಕ್ರಿಸ್ತರ ಜನನದ ಬಗ್ಗೆ ವಿವರಿಸುವ ಗೊಂಬೆಗಳಿರುವ ಗೋದಲಿ ಪ್ರದರ್ಶನ ನಡೆಯಿತು. ಗೋದಲಿ ಪ್ರದರ್ಶನ ಸಹಸ್ರಾರು ಜನ ಕಣ್ತುಂಬಿಕೊಂಡರು.
ಜಗತ್ಪ್ರಸಿದ್ಧ ಪುರಾತನ ಚರ್ಚ್ಗಳಲ್ಲಿ ಸೇಂಟ್ ಫಿಲೋಮಿನಾ ಚರ್ಚ್ ಒಂದಾಗಿದೆ. ಕ್ರಿಸ್ಮಸ್ಗಾಗಿ ವಿಶೇಷ ಅಲಂಕಾರದಲ್ಲಿ ಚರ್ಚ್ ಕಂಗೊಳಿಸುತ್ತಿದೆ. ಅಂದಿನ ಆಳರಸರ ಕಾಲದಲ್ಲಿ ಚರ್ಚ್ ನಿರ್ಮಾಣವಾಗಿದೆ.
ಸುಮಾರು 175 ಅಡಿ ಎತ್ತರದ ಆಕರ್ಷಕ ಗೋಪುರಗಳನ್ನು ಹೊಂದಿರುವ ಚರ್ಚ್ ಇದಾಗಿದ್ದು, ಕ್ರಿಸ್ಮಸ್ ಅಂಗವಾಗಿ ಚರ್ಚ್ ನ ಒಳ ಹಾಗು ಹೊರ ಆವರಣದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರಗೊಂಡಿದೆ. ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಯೇಸುವಿನ ಜನ್ಮ ದಿನಾಚರಣೆಗೆ ಜನರು ಹರಿದುಬಂದಿದ್ದಾರೆ.

