ಮೈಸೂರು: ಮಳೆಗಾಗಿ ಕಪ್ಪೆ ಮೆರವಣಿಗೆಯನ್ನು ಮಕ್ಕಳು ಮಾಡಿದರು. ಪುರಾತನ ಕಾಲದ ನಂಬಿಕೆಗೆ ಗ್ರಾಮಸ್ಥರು ಮೊರೆ ಹೋದರು. ಹೆಚ್.ಡಿ ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ಕಪ್ಪೆ ಮೆರವಣಿಗೆ ಮಾಡಲಾಯಿತು.

ತೋಟದ ಬಾವಿಯಲ್ಲಿ ಕಪ್ಪೆ ಹಿಡಿದು ಪೂಜೆ ಸಲ್ಲಿಕೆ ಮಾಡಲಾಯಿತು. ಒನಕೆಯಲ್ಲಿ ಕಪ್ಪೆ ಇರಿಸಿ ಪೂಜೆ ಮಾಡಲಾಯಿತು. ಸ್ನಾನ ಮಾಡಿ ಮೈಯಿಗೆ ಅರಿಸಿನ ಕುಂಕುಮ ಹಚ್ಚಿಕೊಂಡು ದೇಹಕ್ಕೆ ಸೊಪ್ಪು ಕಟ್ಟಿಕೊಂಡು ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಎಂದು ಮಕ್ಕಳು ಹೆಜ್ಜೆ ಹಾಕಿದರು.

ಊರಿನ ತುಂಬ ತಮಟೆ ಬಾರಿಸಿಕೊಂಡು ಮೆರವಣಿಗೆ ಮಾಡಲಾಯಿತು. ಗ್ರಾಮ ದೇವತೆ ಮಾರಮ್ಮನಿಗೂ ಪೂಜೆ ಸಲ್ಲಿಕೆ ಮಾಡಲಾಯಿತು. ಗ್ರಾಮಸ್ಥರಿಂದ ಸಂಗ್ರಹಿಸಿದ್ದ ದವಸ ಧಾನ್ಯಗಳಿಂದ ಅಡುಗೆ ತಯಾರಿಸಿ ಅನ್ನ ಸಂತರ್ಪಣೆ ಮಾಡಿ, ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.