ಮೈಸೂರು : ದಾಸವಾಳ ಹೂ ನುಂಗಿ ಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಮನೆಯ ಹೊಸ್ತಿಲಲ್ಲಿ ಇಟ್ಟಿದ್ದ ದಾಸವಾಳ ಹೂ ನುಂಗಿ ಶ್ವಾಸಕೋಶದಲ್ಲಿ ಹೂ ಸಿಲುಕಿ 7 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಗ್ರಾಮದ ಸುದರ್ಶನ್, ನವ್ಯ ದಂಪತಿ ಪುತ್ರ. ಆರೂವರೆ ತಿಂಗಳ ಪುತ್ರ ಚಿನ್ಮಯ್ ಗೌಡ ಮೃತ ದುರ್ದೈವಿ ಮಗು. ಮೊನ್ನೆ ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂವುಗಳನ್ನು ಇಡಲಾಗಿತ್ತು. ಈ ವೇಳೆ ಮಗು ಚಿನ್ಮಯ್ ತನ್ನ ಅಣ್ಣನ ಜೊತೆ ಆಟವಾಡುತ್ತಿದ್ದನು.

ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಚಿನ್ಮಯ್ ಬಾಯಿಗೆ ಹಾಕಿಕೊಂಡಿದ್ದನು. ಇದನ್ನು ಗಮನಿಸಿದ ಮಗುವಿನ ಅಣ್ಣ. ಹೂ ಹೊರತೆಗೆಯಲು ಪ್ರಯತ್ನಿಸಿದ್ದಾನಾದರೂ, ಅಷ್ಟರಲ್ಲೇ ಮಗು ಆ ದಿಂಡನ್ನು ನುಂಗಿಬಿಟ್ಟಿದೆ. ಮಗು ನುಂಗಿದ ಹೂವಿನ ಭಾಗವು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತೀವ್ರವಾದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

ಗಾಬರಿಗೊಂಡ ಪೋಷಕರು ಮಗುವನ್ನ ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.