ನಂಜನಗೂಡು: ದೇಶದಲ್ಲಿ ಯುವಶಕ್ತಿ ಒಂದಾದರೆ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಕರು ಒಗ್ಗಟ್ಟಾಗಿ ನಿಂತು ಪ್ರಶ್ನೆ ಮಾಡುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಹೇಳಿದರು.
ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಭತ್ತದ ದಲ್ಲಾಳಿಗಳು, ಕಬ್ಬಿನ ಕಾರ್ಖಾನೆಗಳು, ಸಿಗರೇಟ್ ಕಂಪನಿಗಳು, ಎಣ್ಣೆ ಮಾಲೀಕರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಇವುಗಳನ್ನು ಬೆಳೆಯುವ ರೈತರು ಮಾತ್ರ ಇನ್ನೂ ಬಡವರಾಗಿಯೇ ಇದ್ದಾರೆ. ಕೇಂದ್ರ ಸರ್ಕಾರ ಪ್ರತಿವರ್ಷಕ್ಕೆ 15 ಲಕ್ಷ ಕೋಟಿ ರೂ. ಸಾಲ ಮಾಡುತ್ತಿದ್ದಾರೆ. ಈ ಸಾಲವೆಲ್ಲ ಸಾರ್ವಜನಿಕರ ಮೇಲೆ ಏರುತ್ತಿದ್ದಾರೆ. ರೈತರನ್ನು ರಾಜಕಾರಣಿಗಳು ವೋಟು ಹಾಕುವ ಯಂತ್ರ ಮಾಡಿಕೊಂಡಿದ್ದಾರೆ.
ದೇಶದಲ್ಲಿ ರೈತರು ಬದಲಾವಣೆ ಆಗಬೇಕು. ರೈತರು ಬೀದಿಗಿಳಿದರೆ ಮಾತ್ರ ಬದಲಾವಣೆ ಸಾಧ್ಯ. ದೊಡ್ಡ ದೊಡ್ಡ ಕಂಪನಿ ಮಾಲೀಕರು ಕೋಟಿ ಕೋಟಿ ಸಾಲ ತೆಗೆದುಕೊಂಡು ಕಟ್ಟಲು ಸಾಧ್ಯವಿಲ್ಲ ಎಂದು ಕೋರ್ಟ್ ಮೊರೆ ಹೋಗುತ್ತಾರೆ. ಆದರೆ, ರೈತರು ಕೇವಲ ಲಕ್ಷ ರೂ.ಗಳಲ್ಲಿ ಸಾಲ ಪಡೆದುಕೊಂಡು ಯಾವುದೇ ಕೋರ್ಟ್ ಗಳಿಗೆ ಹೋಗುವುದಿಲ್ಲ. ನಮ್ಮನ್ನು ಆಳುತ್ತಿರುವ ಎಲ್ಲ ಸರ್ಕಾರಗಳು ಕಾನೂನುಗಳನ್ನು ಬದಲಾವಣೆ ಮಾಡುತ್ತಾರೆ. ಸರ್ಕಾರಗಳು ಇರುವುದು ರೈತರ ಸೇವೆ ಮಾಡಲು ಮಾತ್ರ.
ಡಾ.ಬಿ.ಅರ್. ಅಂಬೇಡ್ಕರ್ ರವರ ವಿಚಾರಗಳನ್ನು ಮೊದಲು ಓದಿಕೊಳ್ಳಬೇಕು. ಔಷಧಿ ಗೊಬ್ಬರ ಮಾರುವ ಅಂಗಡಿಗಳವರನ್ನು ಒಗ್ಗೂಡಿಸಿ ಕೃಷಿ ಇಲಾಖೆಯವರು ರೈತ ದಿನಾಚರಣೆಯನ್ನು ಮಾಡುತ್ತಾರೆ. ಇದು ಕಾಟಾ ಚಾರದ ರೈತ ದಿನಾಚರಣೆ. ಹಳ್ಳಿ ಹಳ್ಳಿಗೆ ಬಂದು ರೈತ ದಿನಾಚರಣೆಯನ್ನು ಮಾಡಬೇಕಾಗಿತ್ತು. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ರೈತ ದಿನಾಚರಣೆ ಆಚರಣೆ ಆಗಬೇಕಾಗಿತ್ತು. ಸರ್ಕಾರಗಳು ರೈತರು, ದಲಿತರನ್ನು ಉದ್ಧಾರ ಮಾಡ್ತೀವಿ ಎನ್ನುತ್ತಾರೆ ಆದರೆ, ಅದು ಸಾಧ್ಯವಾಗಿಲ್ಲ. ಇತ್ತೀಚೆಗೆ ಗಣಿ ಮಾಫಿಯಾ, ರಿಯಲ್ ಎಸ್ಟೇಟ್ ಹಾಗೂ ಖಾಸಗಿ ಶಾಲೆಗಳ ಮಾಫಿಯಾ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿಸುತ್ತಿದ್ದಾರೆ.
ಪ್ರತಿ ಹಳ್ಳಿಗಳಲ್ಲೂ ರೈತ ಸಂಘಗಳು ಹುಟ್ಟಿಕೊಂಡರೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ಕೊಡೋದನ್ನ ಮೊದಲು ರೈತರು ನಿಲ್ಲಿಸಿದಾಗ ಮಾತ್ರ ರೈತರು ಉದ್ಧಾರವಾಗಲು ಸಾಧ್ಯ ಎಂದರು.
ಇದೇ ಸಂಧರ್ಭದಲ್ಲಿ ಗ್ರಾಮದ ನೂರಾರು ಜನರು ಸಂಘಟನೆಗೆ ಸೇರ್ಪಡೆಗೊಂಡರು. ಹಸಿರು ಶಾಲು ಹೊದಿಸುವ ಮೂಲಕ ಸಂಘಟನೆಗೆ ಬರಮಾಡಿಕೊಂಡರು. ಕಾರ್ಯಕ್ರಮಕ್ಕೆ ಗ್ರಾ.ಪಂ ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ಇದೇ ಸಂದರ್ಭದಲ್ಲಿ ದೂರು ನೀಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಹಿರಿಯ ರೈತ ಹೋರಾಟಗಾರ ಬೊಕ್ಕಹಳ್ಳಿ ನಂಜುಂಡಸ್ವಾಮಿ, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ರಂಗಸ್ವಾಮಿ, ಮಹದೇವ ನಾಯಕ, ಗ್ರಾಮ ಘಟಕದ ಅಧ್ಯಕ್ಷ ಕಿರಣ್, ಮಹೇಶ್, ಸಿದ್ದೇಗೌಡ ಸೇರಿದಂತೆ ನೂರಾರು ರೈತರು ಹಾಜರಿದ್ದರು.

