News Karnataka Kannada
Monday, April 29 2024
ಚಾಮರಾಜನಗರ

ಮೇಕೆದಾಟು ಪಾದಯಾತ್ರೆ: ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿಕ್ರಿಯೆ

Dk Shivakumar
Photo Credit :

ಚಾಮರಾಜನಗರ: ಇಂದು ಮೇಕೆದಾಟು ಪಾದಯಾತ್ರೆ ಮಾರ್ಗ, ಕೋವಿಡ್ ನಿಯಮದ ಅಡಿಯಲ್ಲಿ 100ಕ್ಕೂ ಹೆಚ್ಚು ವೈದ್ಯರು, 10 ಆಂಬ್ಯುಲೆನ್ಸ್, ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ವ್ಯವಸ್ಥೆ ಸೇರಿದಂತೆ ಎಲ್ಲ ನಿಯಮ ಪಾಲನೆಗೆ ಮಾರ್ಗದರ್ಶನ ನೀಡಿದ್ದೇವೆ.

ಮೊದಲ ದಿನ ಕೊಡಗು ಚಾಮರಾಜನಗರ ಜಿಲ್ಲೆ ಹಾಗೂ ರಾಜ್ಯದ ಎಲ್ಲ ಕಡೆಯ ಜನರು ಭಾಗವಹಿಸಲಿದ್ದಾರೆ. ಎರಡನೇ ದಿನ ಮೈಸೂರು ಗ್ರಾಮಾಂತರ ಕ್ಷೇತ್ರಗಳ ಜನರು, ಮೂರನೇ ದಿನ ಮೈಸೂರು ನಗರ ಕ್ಷೇತ್ರಗಳು, ನಾಲ್ಕನೇ ದಿನ ಹಾಸನ, ಐದನೇ ದಿನ ಮಂಡ್ಯ, ಆರನೇ ದಿನ ತುಮಕೂರಿನ ಜನ ಬರುತ್ತಾರೆ.

ನಂತರ ಬೆಂಗಳೂರು ನಗರ ಪ್ರದೇಶಕ್ಕೆ ಪಾದಯಾತ್ರೆ ಆಗಮಿಸಲಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ನಂತರ ನಗರ ಪ್ರದೇಶದ ಜನ ಭಾಗವಹಿಸಲಿದ್ದಾರೆ.

ಜ. 19 ರಂದು ರಾಜ್ಯದ ಎಲ್ಲ ಭಾಗಗಳ ಜನರು 6 ಕಿ.ಮೀ ಕ್ರಮಿಸಲಿದ್ದಾರೆ. ನಂತರ ಬಸವನಗುಡಿ ಮೈದಾನದಲ್ಲಿ ಸಭೆ ಮಾಡುತ್ತೇವೆ. ಇಲ್ಲಿ ಮೂರು ವೇದಿಕೆ ಮಾಡಿ, ಒಂದು ಸಾಹಿತಿಗಳು ಗುರುಹಿರಿಯರಿಗೆ, ಕಲಾವಿದರಿಗೆ ಮೀಸಲು. ಮಠಾಧೀಶರುಗಳನ್ನು ಆಹ್ವಾನಿಸಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಪಾದಯಾತ್ರೆ ಮುನ್ನಾದಿನ ರಣದೀಪ್ ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ ಅವರು ಸಂಗಮದ ಬಳಿ ವಾಸ್ತವ್ಯ ಹೂಡಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರತಿನಿತ್ಯ ನಡೆಯಲು ಬಯಸುವವರು ಬಹಳ ಜನ ಇದ್ದಾರೆ. ಇದುವರೆಗೆ 4817 ಮಂದಿ ಆನ್ಲೈನ್ ಮೂಲಕ ನೋಂದಣಿ ಮಾಡಿದ್ದು, ಇನ್ನಷ್ಟು ಮಂದಿ ಸೇರಿಕೊಳ್ಳಲಿದ್ದಾರೆ. ಇವರಿಗೆ ವಾಸ್ತವ್ಯ, ಊಟದ ವ್ಯವಸ್ಥೆ ಮಾಡಲಾಗುವುದು. ಆಯಾ ಜಿಲ್ಲೆಯವರು ತಮ್ಮ ತಂಡ ಕರೆದುಕೊಂಡು ಬರಲಿದ್ದಾರೆ.

ಸುರ್ಜೆವಾಲ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನ್ನ ಬಳಿ ಸುರ್ಜೆವಾಲ ಅವರು ಬರುವುದಾಗಿ ತಿಳಿಸಿದ್ದರು. ನೋಡೋಣ ಏನಾಗುತ್ತದೆ’ ಎಂದರು.

ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಅನುಮತಿ ನೀಡದಿದ್ದರೆ ಮುಂದಿನ ನಡೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಚುನಾವಣೆ ಮಾಡಬಹುದು, ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ ಮಾಡಿಸಬಹುದು. ಪ್ರಧಾನಿಗಳು ಚುನಾವಣಾ ಯಾತ್ರೆ ಮಾಡಬಹುದು. ಅಗ ಕೊರೋನಾ ಬರುವುದಿಲ್ಲ. ಆದರೆ ರಾಜ್ಯದ ಜನರ ಕುಡಿಯುವ ನೀರಿಗಾಗಿ, ನಮ್ಮ ನೀರು, ನಮ್ಮ ಹಕ್ಕಿಗಾಗಿ ಹೋರಾಟ ಮಾಡುವಾಗ ಕೊರೊನಾ ಬರುತ್ತದಾ?

ಸರ್ಕಾರ ಏನೇ ಅಡ್ಡಿ ಮಾಡಿದರೂ ಪಾದಯಾತ್ರೆ ನಡೆಯುತ್ತದೆ. ಯಾರನ್ನು ಬೇಕಾದರೂ ಬಂಧಿಸಲಿ. ಇದಕ್ಕೆ ನಾವು ಹೆದರುವುದಿಲ್ಲ. ಯಾವ ರೀತಿ ತಂತ್ರಗಾರಿಕೆ ಮಾಡಬೇಕು ಎಂಬುದು ನಮಗೂ ಗೊತ್ತಿದೆ.

ಒಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾಗ ಆಸ್ಪತ್ರೆಗಳಿಗೆ ಮಾಹಿತಿ ನೀಡಿರುವುದಾಗಿ ಭರವಸೆ ನೀಡಿದ್ದು, ಅವರಿಗೆ ಪ್ರಜ್ಞೆ ಇದೆ. ಅವರು ಯಾಕೆ ಈ ರೀತಿ ಮಾಡುತ್ತಾರೆ.

ಕೆಲವು ಬಿಜೆಪಿ ನಾಯಕರು ಇದನ್ನು ತಡೆಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದಾಗ ಇದಕ್ಕೆ ನಮ್ಮಿಂದ ಆಗುವ ಡಲ್ಲ ಸಹಕಾರ ನೀಡುತ್ತೇವೆ ಎಂದಿದ್ದಾರೆ. ನಾನು ಅವರಿಗೂ ಅಧಿಕೃತವಾಗಿ ಪತ್ರ ಬರೆದಿದ್ದೇನೆ.

ನಾನು ಎಲ್ಲ ಪಕ್ಷದ ಶಾಸಕರಿಗೆ, ಮಾಜಿ ಶಾಸಕರು, ಕಲಾವಿದರಿಗೆ ಆಹ್ವಾನ ನೀಡಿದ್ದೇನೆ. ಇದು ನನ್ನ ಕಾರ್ಯಕ್ರಮ ಅಲ್ಲ. ರಾಜ್ಯದ ಜನರ, ಪಕ್ಷಾತೀತ ಕಾರ್ಯಕ್ರಮ. ಎಲ್ಲ ಸಂಘಟನೆಗೆ ಆಹ್ವಾನ ನೀಡಿದ್ದೇವೆ’ ಎಂದರು.

ಕುತ್ತಿಗೆ ಕುಯ್ದು ರಾಜಕಾರಣ ಮಾಡಿದ್ದಾರೆ ಎಂಬ ಸಚಿವ ಅಶ್ವಥ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರ ಮಾತಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ. ಅವರು ನೂರಲ್ಲ ಸಾವಿರ ಹೇಳಿಕೆ ನೀಡಲಿ. ಸಮಯ ಬಂದಾಗ ಉತ್ತರಿಸುತ್ತೇನೆ. ಮೊದಲು ಕಾವೇರಿ ನೀರು ತರೋಣ. ಅವರಿಗೂ ನಮ್ಮ ಜಿಲ್ಲೆಗೂ ಏನು ಸಂಬಂಧ? ಎಂತೆಂಥವರ ಜತೆಯೋ ರಾಜಕಾರಣ ಮಾಡಿದ್ದೇವೆ. ಇವರ ಜತೆಗೂ ಮಾಡೋಣ. ಅವರು ನಮ್ಮ ಊರಿನವರೇ ಎಂದು ಹೇಳಿಕೊಳ್ಳಲಿ ಸಂತೋಷ. ಅವರೂ ನಮ್ಮ ಸಹೋದರರಾಗಲಿ. ಅವರು ಅಶ್ವಥನಾರಾಯನಣ್ಣ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು