News Karnataka Kannada
Friday, May 03 2024
ಚಾಮರಾಜನಗರ

ಓಂಶಕ್ತಿ ಯಾತ್ರೆಯಿಂದ ಕೊರೊನಾ ಹೆಚ್ಚಳ

Om Shakti
Photo Credit :

ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಸೋಂಕು ಹೆಚ್ಚಾಗುವಲ್ಲಿ ಓಂಶಕ್ತಿ ಯಾತ್ರಿಗಳ ಪಾತ್ರವಿದ್ದು, ಇದಕ್ಕೆ ತಮಿಳುನಾಡಿಗೆ ಹೋಗಿ ಬಂದಿದ್ದ ಯಾತ್ರಿಗಳನ್ನು ತಪಾಸಣೆ ಮಾಡಿದಾಗ ಅವರಲ್ಲಿ ಕೊರೊನಾ ಸೋಂಕು ದೃಢವಾಗಿರುವುದು ಸಾಕ್ಷಿಯಾಗಿದೆ.

ಈಗಾಗಲೇ ಮಂಡ್ಯ, ಚಾಮರಾಜನಗರ, ಮೈಸೂರು ಸೇರಿದಂತೆ ಇತರೆ ಜಿಲ್ಲೆಯಲ್ಲಿನ ಓಂಶಕ್ತಿ ಯಾತ್ರಿಗಳಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದ್ದು,  ಅದು ಇನ್ನೆಷ್ಟು ಮಂದಿಗೆ ಹರಡಿದೆಯೋ ಎಂಬ ಭೀತಿಯು ಜನರಲ್ಲಿ ಮೂಡಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಓಂ ಶಕ್ತಿ ಯಾತ್ರೆ ಕೈಗೊಳ್ಳುತ್ತಿರುವುದು ಎಷ್ಟು ಸರಿ ಎಂಬ ಪ್ರಶ‍್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಹಾಗೆನೋಡಿದರೆ ಪ್ರತಿವರ್ಷವೂ ಚಾಮರಾಜನಗರ ಜಿಲ್ಲೆ, ಮಂಡ್ಯ, ರಾಮನಗರ, ಮೈಸೂರು, ಹಾಸನ ಹೀಗೆ ವಿವಿಧ ಜಿಲ್ಲೆಯ ಜನರು ಮಾಲೆ ಹಾಕಿ ತಮಿಳುನಾಡಿನ ಮೇಲ್‌ ಮರವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ತೆರಳುತ್ತಾರೆ. ಈ ದೇವಾಲಯಕ್ಕೆ ಚಾಮರಾಜನಗರ ಜಿಲ್ಲೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಹೀಗೆ ತೆರಳುವ ಬಹಳಷ್ಟು ಯಾತ್ರಿಗಳು ಕೊಳ್ಳೇಗಾಲ ನಗರದ ಹಳೆ ಕುರುಬರ ಬೀದಿಯಲ್ಲಿರುವ ಓಂಶಕ್ತಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಮಾಲೆ ಹಾಕಿಸಿಕೊಂಡು ಬಳಿಕ ತೆರಳುವುದು ಸಂಪ್ರದಾಯವಾಗಿದೆ.

ಇಷ್ಟರಲ್ಲೇ ಬಹಳಷ್ಟು ಭಕ್ತರು ರಾಜ್ಯದಿಂದ ತಮಿಳುನಾಡಿಗೆ ಹೋಗಿ ಅಲ್ಲಿನ ಮೇಲ್‌ ಮರವತ್ತೂರಿನ ಆದಿಪರಾಶಕ್ತಿ ದೇವಿಯ ದರ್ಶನ ಪಡೆದು ಪೂಜಾ ಕೈಂಕರ್ಯವನ್ನು ನೆರವೇರಿಸಿ ಹಿಂತಿರುಗಿದ್ದಾರೆ. ಹೀಗೆ ಹಿಂತಿರುಗಿದ ಯಾತ್ರಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದು ಒಂದು ರೀತಿಯಲ್ಲಿ ಚಾಮರಾಜನಗರ ಮಾತ್ರವಲ್ಲ ಇತರೆ ಜಿಲ್ಲೆಗಳಿಗೂ ಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ಚಾಮರಾಜನಗರಕ್ಕೆ ಹೆಚ್ಚಿನ ಸಂಕಷ್ಟ ತಂದಿದೆ.

ಸದ್ಯ ಚಾಮರಾಜನಗರದ ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ 12 ಭಕ್ತರಲ್ಲಿ ಕೋವಿಡ್‌ಗೆ ಕಾಣಿಸಿದೆ. ಕಳೆದ ವಾರ ಯಳಂದೂರು ತಾಲೂಕಿನಿಂದ ಮೂರು ಬಸ್‌ಗಳಲ್ಲಿ 104 ಭಕ್ತರು ತಮಿಳುನಾಡಿನ ದೇವಾಲಯಕ್ಕೆ ತೆರಳಿ ಮತ್ತೆ ತಮ್ಮೂರಿಗೆ ಮರಳುತ್ತಿದ್ದಾಗ ಅವರನ್ನು ದಾರಿ ಮಧ್ಯೆ ಅಂದರೆ ಬಿಳಿಗಿರಿರಂಗನಬೆಟ್ಟದ ರಸ್ತೆಯ ರಂಗನಾಥಪುರದ ಮಾರಮ್ಮ ದೇವಾಲಯದ ಬಳಿ ಯಳಂದೂರು ತಾಲ್ಲೂಕು ಆಡಳಿತವು ತಪಾಸಣೆಗೆ ಒಳಪಡಿಸಿತ್ತು.

ಈ ವೇಳೆ 104 ಮಂದಿ ಪೈಕಿ 12 ಮಂದಿಗೆ ಸೋಂಕಿರುವುದು ದೃಢವಾಗಿತ್ತು. ಈ ಕುರಿತಂತೆ ಯಳಂದೂರು ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾಹಿತಿ ನೀಡಿದ್ದು, ಸೋಂಕಿತರನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಭಕ್ತರು ತೀರ್ಥಕ್ಷೇತ್ರಗಳಿಗೆ ತೆರಳುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಈಗಾಗಲೇ ಹೋಗಿದ್ದಲ್ಲಿ, ಮನೆಗೆ ವಾಪಸ್‌ ಆಗುವುದಕ್ಕೂ ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಓಂಶಕ್ತಿ ಯಾತ್ರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸುತ್ತಿರುವುದರಿಂದ ಕೊಳ್ಳೇಗಾಲ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ತಮಿಳುನಾಡಿಗೆ ಓಂಶಕ್ತಿ ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವ ಭಕ್ತರಿಗೆ ಮಾಲೆ ಹಾಕದಂತೆ ಕೊಳ್ಳೇಗಾಲದ  ಹಳೆ ಕುರುಬರ ಬೀದಿಯಲ್ಲಿರುವ ಓಂಶಕ್ತಿ ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.  ಒಂದು ವೇಳೆ ಹಾಕಿದರೂ ರಾಜ್ಯದ ಚೆಕ್‌ಪೋಸ್ಟ್‌ ಗಳಲ್ಲಿ ಎಲ್ಲರನ್ನೂ ತಡೆದು ವಾಪಸ್‌ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇಷ್ಟೇ ಅಲ್ಲದೆ, ಪ್ರಭಾರ ತಹಸೀಲ್ದಾರ್ ಶಂಕರ್ ರಾವ್  ಅವರು, ಕೊಳ್ಳೇಗಾಲ ತಾಲೂಕಿನಿಂದ ಓಂ ಶಕ್ತಿ ಯಾತ್ರೆ ಕೈಗೊಳ್ಳಲು ಬುಕ್ ಮಾಡಿಕೊಂಡಿದ್ದ ಐದು ಕೆ.ಎಸ್. ಆರ್. ಟಿ.ಸಿ ಬಸ್ ಗಳನ್ನು ರದ್ದು ಮಾಡಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ, ಓಂ ಶಕ್ತಿ ಗೆ ಯಾತ್ರೆ ಕೈಗೊಳ್ಳದಂತೆ ಮನವರಿಕೆ ಮಾಡಿದ್ದು, ಇದರಿಂದ ಮುಂದೆ ಆಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ.

ಒಟ್ಟಾರೆಯಾಗಿ ಚಾಮರಾಜನಗರ ಮೂಲಕ ತಮಿಳುನಾಡಿನ ಮೇಲ್‌ ಮರವತ್ತೂರಿನ ಆದಿಪರಾಶಕ್ತಿ ದೇವಿಯ ದರ್ಶನಕ್ಕೆ ತೆರಳದಂತೆ ಸೂಚಿಸಲಾಗಿದೆಯಲ್ಲದೆ, ಯಾತ್ರೆಗೆ ತೆರಳಿ ಹಿಂತಿರುಗುವ ಭಕ್ತರನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಜನರೇ ಎಚ್ಚೆತ್ತುಕೊಂಡು ಮನೆಯಲ್ಲಿದ್ದರೆ ಅದಕ್ಕಿಂತ ಸುರಕ್ಷತೆ ಬೇರೊಂದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು