ನಂಜನಗೂಡು: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಸದನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ನಂಜನಗೂಡು ನಗರದ ಅಂಬೇಡ್ಕರ ಪ್ರತಿಮೆ ಮುಂಭಾಗದಲ್ಲಿ ಛಲವಾದಿ ಮಹಾಸಭಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಛಲವಾದಿ ಮಹಾಸಭಾ ಅಧ್ಯಕ್ಷ ಉಮೇಶ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸತ್ತ ಮೇಲೆ ನಮಗೆ ಸ್ವರ್ಗ ಸಿಗುವುದು ಬೇಡ ಬದುಕಿರುವಾಗಲೇ ನಮಗೆ ಅಂಬೇಡ್ಕರ್ ಅವರು ಸ್ವರ್ಗವನ್ನೇ ನೀಡಿದ್ದಾರೆ.

ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದಲೇ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರನ್ನು ಸಂವಿಧಾನದ ಅಡಿಯಲ್ಲಿಯೇ ಸಚಿವ ಸಂಪುಟದಿಂದ ವಜಾ ಮಾಡಬೇಕು. ಗುಜರಾತ್ ರಾಜ್ಯದಲ್ಲಿ ಗಡಿಪಾರು ಆಗಿದ್ದ ಗೂಂಡ ಅಮಿತ್ ಶಾ ರವರನ್ನು ಈ ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾ ಪಟ್ಟಣ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷ ಜಗದೀಶ್, ಜಯರಾಮ್, ಮಹೇಶ್, ಧನುಷ್, ದೇವನೂರು ಕಾಂತರಾಜ್, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.