ಮೈಸೂರು: ಕಾವೇರಿ ನೀರಾವರಿ ನಿಯಂತ್ರಣ ಸಮಿತಿಯ ಅವೈಜ್ಞಾನಿಕ ಆದೇಶ ಖಂಡಿಸಿ ಹಾಗೂ ಮಳೆ ಇಲ್ಲದೆ ಒಣಗಿದ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಕೆ.ಆರ್ ಪುರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರೈತರು ಮಳೆ ಇಲ್ಲದೆ ಒಣಗಿದ ಜೋಳದ ಬೆಳೆಯನ್ನು ತಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಾಡ್ಯ ರವಿ, ಪ್ರತಿದಿನ 15 ದಿನಗಳ ಕಾಲ 3.500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕಾವೇರಿ ನೀರಾವರಿ ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ತಮಿಳುನಾಡಿಗೆ ನೀರು ಹರಿಸಬೇಕೆಂದು ಅವೈಜ್ಞಾನಿಕ ಆದೇಶ ನೀಡಿರುವುದು ಖಂಡನೀಯ.
ನಮ್ಮಲ್ಲಿ ಈಗ 52 ಅಡಿ ನೀರು ಮಾತ್ರ ಶೇಖರಣೆಯಾಗಿದೆ. 95 ಅಡಿ ನೀರು ಇರಬೇಕಿತ್ತು. ಮಳೆ ಇಲ್ಲದೆ ಅಣೆಕಟ್ಟುಗಳು, ಜಲಾಶಯಗಳು ಖಾಲಿಯಾಗಿವೆ. ಕೆರೆಗಳನ್ನು ತುಂಬಿಸದೆ ಎಲ್ಲಾ ಕೆರೆಗಳು ಬತ್ತಿ ಹೋಗಿವೆ. ಇದರಿಂದ ನಮ್ಮ ಕವಲಂದೆ ಭಾಗದಲ್ಲಿ ಬರ ಆವರಿಸಿದೆ ಎಂದು ಅವರು ತಿಳಿಸಿದರು.
ರೈತರು ಬೆಳೆದಿದ್ದ ಕಬ್ಬು, ಬಾಳೆ, ಜೋಳ, ಅಲಸಂದೆ, ಅವರೆ ಸೇರಿದಂತೆ ಎಲ್ಲಾ ಬೆಳೆಗಳು ಒಣಗುತ್ತಿವೆ. ತಮಿಳುನಾಡಿಗೆ ನೀರು ಹರಿಸಿ ಸರ್ಕಾರ ರೈತರ ಸಮಾಧಿ ಮಾಡುತ್ತಿದೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳು ಬಂದು 2 ತಿಂಗಳಾಯಿತು. ಅವರು ಬರ ಅಧ್ಯಯನ ಮಾಡಬೇಕಿತ್ತು. ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರಕ್ಕೆ ಸರಿಯಾದ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ರೈತರನ್ನು ರಸ್ತೆಯಲ್ಲಿ ಕೂರುವ ಪರಿಸ್ಥಿತಿಗೆ ತಂದ ಸರ್ಕಾರಕ್ಕೆ ದಿಕ್ಕಾರ ಎಂದು ರವಿ ಹೇಳಿದರು.
ಈ ಭಾಗದ ಮೈಸೂರು ಜಿಲ್ಲೆಯಾದ್ಯಂತ 55 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ದೆಹಲಿಗೆ ತೆರಳಿ ಸಚಿವ ಸ್ಥಾನ ಕೇಳುತ್ತಿರುವುದು ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಇದು ನಿಮ್ಮ ಆಡಳಿತದ ವೈಫಲ್ಯ ಎಂದು ಅವರು ಟೀಕಿಸಿದರು. ಅಚ್ಚುಕಟ್ಟು ಪ್ರದೇಶದ ಬೆಳೆಗಳು ಒಣಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜನಜಾನುವಾರುಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಂಜನಗೂಡು – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ ಪರಿಣಾಮವಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಕೂಡ ಕಂಡು ಬಂದಿತ್ತು. ವಾಹನ ಸವಾರರು ಮತ್ತು ಪ್ರಯಾಣಿಕ ಪರದಾಡುವಂತಾಯಿತು.
ಈ ಪ್ರತಿಭಟನೆಯಲ್ಲಿ ರಾಜ್ಯ ಖಜಾಂಜಿ ಮಲೆಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಕೊಂತಯ್ಯನಹುಂಡಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೀರಮ್ಮನಹಳ್ಳಿ ಕುಮಾರ್, ಅರಳಿಕಟ್ಟೆ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಮೂರ್ತಿ, ಸಂಘಟನಾ ಕಾರ್ಯದರ್ಶಿ ತಗಡೂರು ನಾಗೇಶ್, ಘಟಕದ ಅಧ್ಯಕ್ಷರಾದ ಲೋಕೇಶ್, ಉಮೇಶ್, ಸಿದ್ದಪ್ಪ, ಸಿದ್ದು, ಮಂಜು, ಕುಮಾರ್, ತೊರವಳ್ಳಿ ಗಣೇಶ್, ಮಹೇಶ್, ಶಿವಬುದ್ದಿ, ಗುರು, ಬಸವಣ್ಣ, ಚಿನ್ನಸ್ವಾಮಿ, ನಟರಾಜು ಸೇರಿದಂತೆ ರೈತರು ಭಾಗವಹಿಸಿದ್ದರು.
ಆ.3 ರವರೆಗೆ ಕಾದು ನೋಡುತ್ತೇವೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆ.3 ರನ್ನು ನೋಡಿಕೊಂಡು ರಾಜ್ಯ, ಜಿಲ್ಲೆ, ತಾಲ್ಲೂಕು ಎಲ್ಲವನ್ನೂ ಬಂದ್ ಮಾಡುತ್ತೇವೆ. ನೀರು ನಿಲ್ಲಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಗ್ರಾಮಗಳಿಗೆ ಬರುವ ಶಾಸಕರು ಮತ್ತು ಸಂಸದರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹಾಡ್ಯ ರವಿ ಎಚ್ಚರಿಕೆ ನೀಡಿದರು.

