ನಂಜನಗೂಡು: ಕೊನೆಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಮಾರಾಟ ಮಾಡಿದ ತಂದೆ ತಾಯಿ, ಮಧ್ಯವರ್ತಿ ಹಾಗೂ ಕೊಂಡುಕೊಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಗು ತಂದೆ ಅನಿಲ್ ಕುಮಾರ್, ತಾಯಿ ಸೌಮ್ಯ, ಮಧ್ಯವರ್ತಿ ಲಕ್ಷ್ಮಮ್ಮ ಹಾಗೂ ಮಗುವನ್ನ ಕೊಂಡುಕೊಂಡ ಗುಂಡ್ಲುಪೇಟೆ ನಿವಾಸಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ನಂಜನಗೂಡು ನೀಲಕಂಠನಗರ ದಂಪತಿ ಅನಿಲ್ ಕುಮಾರ್ ಹಾಗೂ ಪತ್ನಿ ಸೌಮ್ಯ ರಿಗೆ ಹುಟ್ಟಿದ ಮೂರನೇ ಮಗು ಅಮೂಲ್ಯ(2) ಳನ್ನ ಕೇವಲ 14 ಸಾವಿರಕ್ಕೆ ಗುಂಡ್ಲುಪೇಟೆ ನಿವಾಸಿಗಳಿಗೆ ಮಾರಾಟ ಮಾಡಲಾಗಿತ್ತು.

ಈ ವಿಚಾರ ಅಂಗನವಾಡಿ ಕಾರ್ಯಕರ್ತೆ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ತಲುಪಿತ್ತು. ಸ್ಥಳೀಯರಾದ ಅನಂತ್ ಎಂಬುವರು ಈ ಬಗ್ಗೆ ಮಧ್ಯಪ್ರವೇಶಿಸಿ ಮಗು ಖರೀದಿಸಿದವರಿಗೆ ಎಚ್ಚರಿಕೆ ನೀಡಿ ಪೋಷಕರ ವಶಕ್ಕೆ ತಲಪುವಂತೆ ಮಾಡಿದ್ರು. ಇದು ಪೊಲೀಸರ ಗಮನಕ್ಕೂ ಬಂದಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ನೀಲಕಂಠ ನಗರಕ್ಕೆ ಭೇಟಿ ನೀಡಿ ಮಗುವನ್ನ ವಶಕ್ಕೆ ಪಡೆದರು.

ಜೊತೆಗೆ ಮತ್ತೊಂದು ಗಂಡು ಮಗುವನ್ನೂ ಸಹ ವಶಕ್ಕೆ ಪಡೆದು ಮೈಸೂರಿನ ಛಾಯಾದೇವಿ ಆಶ್ರಮದ ಜವಾಬ್ದಾರಿಗೆ ನೀಡಿದ್ದಾರೆ. ಇಷ್ಟೆಲ್ಲಾ ನಡೆದರೂ ಪೊಲೀಸರು ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸದೆ ಮೌನಕ್ಕೆ ಶರಣಾಗಿದ್ರು. ಈ ವಿಚಾರವಾಗಿ ಸವಿವರವಾದ ಸುದ್ದಿಯನ್ನು ಪ್ರಸಾರ ಮಾಡಿ ಮಕ್ಕಳ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರನ್ನ ಎಚ್ಚರಿಸಲಾಗಿತ್ತು. ಎಚ್ಚೆತ್ತ ಅಧಿಕಾರಿಗಳ ಮಗುವನ್ನ ಮಾರಾಟ ಮಾಡಿದ, ಮಧ್ಯವರ್ತಿ ಹಾಗೂ ಕೊಂಡು ಕೊಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಲಾಗಿದೆ.