ನಂಜನಗೂಡು: ಬೈಕ್ ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದ ವಿದ್ಯಾಪೀಠ ಬಳಿ ನಡೆದಿದೆ. ಗೋಳೂರು ಗ್ರಾಮದ ಜೀವನ್ ಕುಮಾರ್ 25 ಮೃತ ದುರ್ದೈವಿ.
ಹೆಮ್ಮರಗಾಲ ಗ್ರಾಮದಿಂದ ಗೋಳೂರು ಗ್ರಾಮಕ್ಕೆ ಜೀವನ್ ಕುಮಾರ್ ಮತ್ತು ಶ್ರೀನಿವಾಸ್ ಬೈಕ್ ನಲ್ಲಿ ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮತ್ತು ಕಾರು ಉರುಳಿ ಬಿದ್ದಿವೆ. ಬೈಕ್ ನಲ್ಲಿ ತೆರಳುತ್ತಿದ್ದ ಜೀವನ್ ಕುಮಾರ್ ಎಂಬ ಯುವಕ ಸ್ಥಳದಲ್ಲಿಯೇ ಸಾವನಪ್ಪಿದ್ದು, ಹಿಂಬದಿ ಸವಾರ ಶ್ರೀನಿವಾಸ್ ಗೆ ಗಂಭೀರ ಗಾಯಗೊಂಡು ನರಳಾಡುತ್ತಿದ್ದನು.
ಸ್ಥಳದಿಂದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಬೈಕ್ ಮತ್ತು ಕಾರು ಸಂಪೂರ್ಣವಾಗಿ ಜಖಂಗೊಂಡಿವೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕೃಷ್ಣಕಾಂತಕೋಳಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಗೊಂಡ ಶ್ರೀನಿವಾಸ್ ನನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

